ಮಂಡ್ಯ: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ವಿರುದ್ಧ ಲಂಚದ ಆರೋಪ ಮಾಡಿರುವ ಮಂಡ್ಯ ಜಿಲ್ಲೆಯ 7 ಸಹಾಯಕ ಕೃಷಿ ನಿರ್ದೇಶಕರು ಹಾಗೂ ಸಿಬ್ಬಂದಿ ರಾಜಭವನಕ್ಕೆ ದೂರು ಸಲ್ಲಿಸಿದ್ದಾರೆ.
6 ರಿಂದ 8 ಲಕ್ಷ ರೂ. ಕೊಡುವಂತೆ ಚಲುವರಾಯಸ್ವಾಮಿ ಮೇಲಾಧಿಕಾರಿಗಳ ಮೂಲಕ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿ ಅಧಿಕಾರಿಗಳು ರಾಜಭವನಕ್ಕೆ ದೂರು ಅರ್ಜಿ ಸಲ್ಲಿಸಲಾಗಿದೆ.
ಲಂಚದ ಅನಿಷ್ಟ ಪದ್ದತಿಗೆ ಕಡಿವಾಣ ಹಾಕದಿದ್ದರೆ ಅಧಿಕಾರಿಗಳು ಕುಟುಂಬ ಸಮೇತ ವಿಷಕುಡಿಯುವುದಾಗಿ ದೂರಿನಲ್ಲಿ ಎಚ್ಚರಿಕೆ ನೀಡಿದ್ದಾರೆ.
ರಾಜ್ಯಪಾಲರ ಅಧೀನ ಕಾರ್ಯದರ್ಶಿಯಿಂದ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಈ ಕುರಿತು ಪತ್ರ ಬರೆಯಲಾಗಿದೆ. ಈ ಪತ್ರದ ಬಗ್ಗೆ ಕ್ರಮವಹಿಸುವಂತೆ ಮುಖ್ಯಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ.
ಇದೊಂದು ಫೇಕ್ ಲೆಟರ್ ಆದರೂ ತನಿಖೆಗೆ ಸೂಚಿಸುತ್ತೇನೆಂದ ಚಲುವರಾಯಸ್ವಾಮಿ
ರಾಜಭವನಕ್ಕೆ ತಮ್ಮ ವಿರುದ್ಧ ದೂರು ನೀಡಿರುವ ಕುರಿತು ಪ್ರತಿಕ್ರಿಯಿಸಿರುವ, ಕೃಷಿ ಸಚಿವ ಚಲುವರಾಯಸ್ವಾಮಿ, ಲೆಟರ್ ಬಗ್ಗೆ ನನಗೆ ಗೊತ್ತಿಲ್ಲ. ಜೆಡಿ ಬಳಿ ಕೇಳಿದಾಗ ಫೇಕ್ ಲೆಟರ್ ಎಂದಿದ್ದಾರೆ. ಆದರೂ ಈ ಬಗ್ಗೆ ಸತ್ಯಾಸತ್ಯತೆ ತಿಳಿದು ತನಿಖೆಗೆ ಸೂಚಿಸುತ್ತೇನೆ ಎಂದು ಹೇಳಿದ್ದಾರೆ.
ಬಹಳ ಜನ ಹುಡುಕಿ ಹುಡುಕಿ ಗೊಂದಲ ಸೃಷ್ಟಿ ಮಾಡಲು ಕಾದಿದ್ದಾರೆ. ಒಂದು ವೇಳೆ ತಪ್ಪು ಎಸಗಿದ್ರೆ ಕಾರ್ಯದರ್ಶಿಗೆ ತನಿಖೆ ನಡೆಸಲು ಸೂಚಿಸುತ್ತೇನೆ. ಜಂಟಿ ನಿರ್ದೇಶಕರು ಫೇಕ್ ಲೆಟರ್, ನಮ್ಮಲ್ಲಿ ಯಾರು ಆ ತರಹದ ಅಧಿಕಾರಗಳಿಲ್ಲ ಎಂದಿದ್ದಾರೆ.
ನಮ್ಮನ್ನ ಹೆಚ್ಚೆಚ್ಚು ಟಾರ್ಗೆಟ್ ಮಾಡುವುದರಿಂದ ಮತ್ತಷ್ಟು ಪ್ರಕಾಶಮಾನವಾಗುತ್ತೇವೆ. ಮಂಡ್ಯ ಜಿಲ್ಲೆಯಲ್ಲಿ ಜಂಟಿ ನಿರ್ದೇಶಕರು ಯಾರ ಬಳಿ ಮಾತನಾಡುವುದಾಗಲಿ, ಭೇಟಿ ಮಾಡುವುದಾಗಲಿ ಮಾಡಿಲ್ಲ. ನಾನು ಯಾವ ಎಡಿ ಗಳನ್ನೂ ಭೇಟಿ ಮಾಡಿಲ್ಲ. ರಾಜ್ಯದಲ್ಲೇ ಮಾಡಿಲ್ಲ, ನನ್ನ ಜಿಲ್ಲೆಯಲ್ಲಿ ಮಾಡ್ತೀನಾ? ಎಂದು ತಿಳಿಸಿದರು.
ಬೆಳಿಗ್ಗೆ ಎದ್ದು ತಿಂಡಿ, ಊಟ ಮಾಡದೇ ನನ್ನ ಟಾರ್ಗೆಟ್ ಮಾಡುವುದೆ ಕೆಲವರಿಗೆ ಕೆಲಸ. ಅದಕ್ಕೆ ನನಗೆ ಬೇಜಾರಿಲ್ಲ, ನನ್ನ ಕೆಲಸ ನಾನು ಮಾಡ್ತೀನಿ ಎಂದು ಹೇಳಿದರು.