ನವದೆಹಲಿ: ಉದ್ಯೋಗಕ್ಕಾಗಿ ಲಂಚ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮಾಜಿ ಸಚಿವ ವಿ.ಸೆಂಥಿಲ್ ಬಾಲಾಜಿಗೆ ಸುಪ್ರೀಂಕೋರ್ಟ್ ಗುರುವಾರ (ಸೆ.26) ಜಾಮೀನು ಮಂಜೂರು ಮಾಡಿದೆ.
ಈ ಹಗರಣದಲ್ಲಿ ಸೆಂಥಿಲ್ 2023ರ ಜೂನ್ ನಿಂದ ಜೈಲಿನಲ್ಲಿದ್ದರು. ದಿ.ಜೆ.ಜಯಲಲಿತಾ ನೇತೃತ್ವದ ಎಐಎಡಿಎಂಕೆ ಸರ್ಕಾರದಲ್ಲಿ ಬಾಲಾಜಿ ತಮಿಳುನಾಡು ಸಾರಿಗೆ ಸಚಿವರಾಗಿದ್ದ ಸಂದರ್ಭದಲ್ಲಿ 2011 ಹಾಗೂ 2015ರ ನಡುವೆ ಈ ಹಗರಣ ನಡೆದಿರುವುದಾಗಿ ಜಾರಿ ನಿರ್ದೇಶನಾಲಯ ಆರೋಪಿಸಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ 2023ರ ಜೂನ್ ನಲ್ಲಿ ಜಾರಿ ನಿರ್ದೇಶನಾಲಯ ಬಾಲಾಜಿ ಅವರನ್ನು ಬಂಧಿಸಿತ್ತು. ಡಿಎಂಕೆಯ ಎಂಕೆ ಸ್ಟಾಲಿನ್ ನೇತೃತ್ವದ ಸರ್ಕಾರದಲ್ಲಿ ಬಾಲಾಜಿ ಇಂಧನ ಖಾತೆ ಸಚಿವರಾಗಿದ್ದ ವೇಳೆ ಬಂಧನವಾಗಿತ್ತು.
ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಬಾಲಾಜಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ವರ್ಷ ಆಗಸ್ಟ್ 12ರಂದು ಜಾರಿ ನಿರ್ದೇಶನಾಲಯ ಬಾಲಾಜಿ ವಿರುದ್ಧ ಬರೋಬ್ಬರಿ 3,000 ಪುಟಗಳ ಆರೋಪಪಟ್ಟಿ ಸಲ್ಲಿಸಿತ್ತು.
ಈ ಮೊದಲು ಕಳೆದ ವರ್ಷ ಅಕ್ಟೋಬರ್ 19ರಂದು ಹೈಕೋರ್ಟ್ ಬಾಲಾಜಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಅದೇ ರೀತಿ ಸ್ಥಳೀಯ ನ್ಯಾಯಾಲಯ ಕೂಡಾ ಮೂರು ಬಾರಿ ಬಾಲಾಜಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.














