ದೆಹಲಿ: ಮದ್ಯನೀತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಬಿಆರ್‌ಎಸ್ ನಾಯಕಿ ಕೆ ಕವಿತಾ ಅವರನ್ನು ದೆಹಲಿ ನ್ಯಾಯಾಲಯವು ಏಪ್ರಿಲ್ ೯ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿಯಾಗಿರುವ ಕೆ ಕವಿತಾ ಅವರನ್ನು ಮಾರ್ಚ್ ೧೫ ರಂದು ಹೈದರಾಬಾದ್‌ನಿಂದ ಜಾರಿ ನಿರ್ದೇಶನಾಲಯವು ಬಂಧಿಸಿತ್ತು. ಫೆಡರಲ್ ಏಜೆನ್ಸಿಯೊಂದಿಗೆ ಅವರ ಕಸ್ಟಡಿಯನ್ನು ಮಾರ್ಚ್ ೨೩ ರಂದು ಇನ್ನೂ ಐದು ದಿನಗಳವರೆಗೆ ವಿಸ್ತರಿಸಲಾಗಿದ್ದು, ಇಂದಿಗೆ ಮುಕ್ತಾಯವಾಗುತ್ತದೆ. ಆದರೆ ಜಾರಿ ನಿರ್ದೇಶನಾಲಯ ಮಧ್ಯಂತರ ಜಾಮೀನು ಅರ್ಜಿಯಲ್ಲಿ ಉತ್ತರ ನೀಡಲು ಕಾಲಾವಕಾಶ ಕೋರಿತ್ತು. ಕವಿತಾ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ದೆಹಲಿಯ ವಿಚಾರಣಾ ನ್ಯಾಯಾಲಯವು ಏಪ್ರಿಲ್ ೧ ರಂದು ವಿಚಾರಣೆ ನಡೆಸಲಿದೆ.
ಭಾರತ್ ರಾಷ್ಟ್ರ ಸಮಿತಿ ನಾಯಕಿ ಕೆ.ಕವಿತಾ ಅವರು ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಸೇರಿದಂತೆ ಉನ್ನತ ನಾಯಕರೊಂದಿಗೆ ಸಂಚು ರೂಪಿಸಿ ಆಮ್ ಆದ್ಮಿ ಪಕ್ಷದ ನಾಯಕರಿಗೆ ೧೦೦ ಕೋಟಿ ರೂ. ಪಾವತಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿತ್ತು. ಮಾರ್ಚ್ ೧೫ರಂದು ದೆಹಲಿಯ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಹೈದರಾಬಾದ್?ನಲ್ಲಿ ಇಡಿ ಅಧಿಕಾರಿಗಳು ಕವಿತಾ ಮನೆ ಮೇಲೆ ದಾಳಿ ನಡೆಸಿ ಅವರನ್ನು ಬಂಧಿಸಿ, ವಿಚಾರಣೆಗಾಗಿ ದೆಹಲಿಗೆ ಕರೆತಂದಿತ್ತು.