ಮನೆ ರಾಜಕೀಯ ಕೃಷಿಕರ ಬಗ್ಗೆ ಅತಿಹೆಚ್ಚು ಕಾಳಜಿ ವಹಿಸಿದ ಬಜೆಟ್: ಹೆಚ್.ಡಿ.ಕುಮಾರಸ್ವಾಮಿ

ಕೃಷಿಕರ ಬಗ್ಗೆ ಅತಿಹೆಚ್ಚು ಕಾಳಜಿ ವಹಿಸಿದ ಬಜೆಟ್: ಹೆಚ್.ಡಿ.ಕುಮಾರಸ್ವಾಮಿ

0

ನವದೆಹಲಿ: 2047ರ ವಿಕಸಿತ ಭಾರತ ಕನಸು ಸಾಕಾರಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಆಯವ್ಯಯ ಬಹುದೊಡ್ಡ ಕೊಡುಗೆ ನೀಡಲಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.

Join Our Whatsapp Group

ಬಜೆಟ್ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಸಚಿವರು; ಕೃಷಿಕರ ಬಗ್ಗೆ ಅತಿಹೆಚ್ಚು ಕಾಳಜಿ ವಹಿಸಿದ ಬಜೆಟ್ ಇದಾಗಿದೆ ಹಾಗೂ ಮಧ್ಯಮ ವರ್ಗದ ಜನರ ಬದುಕನ್ನು ಸುಲಭ, ಸರಳಗೊಳಿಸುವ ಬಜೆಟ್ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿಗಳಾದ ನರೇಂದ್ರ ಮೋದಿ ಅವರ ದೂರದೃಷ್ಟಿ ಹಾಗೂ ರೈತಪರ ಆಲೋಚನೆಗಳಿಗೆ 2025ನೇ ಸಾಲಿನ ಬಜೆಟ್ ಕೈಗನ್ನಡಿ ಆಗಿದೆ ಎಂದಿರುವ ಅವರು; ಸಾವಯವ ಕೃಷಿಗೆ ಉತ್ತೇಜನ, ಕೃಷಿಯಲ್ಲಿ ಸುಸ್ಥಿರತೆಗೆ ಒತ್ತು, ರೈತನ ವೆಚ್ಚವನ್ನು ತಗ್ಗಿಸುವ ನಿಟ್ಟಿನಲ್ಲಿ ಅಗತ್ಯ ಉಪಕ್ರಮಗಳನ್ನು ಬಜೆಟ್ ನಲ್ಲಿ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ರೈತರು ಸಶಕ್ತಗೊಂಡು ಉತ್ತಮ ಆದಾಯ ಗಳಿಸುವ, ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಮತ್ತು ಭವಿಷ್ಯದ ಸವಾಲುಗಳಿಗೆ ಭಾರತೀಯ ಕೃಷಿಯನ್ನು ಸಜ್ಜುಗೊಳಿಸುವ ಆಯವ್ಯಯ ಇದಾಗಿದೆ ಇಂದು ಕುಮಾರಸ್ವಾಮಿ ಅವರು ಪ್ರತಿಪಾದಿಸಿದ್ದಾರೆ.

ಮುಖ್ಯವಾಗಿ ಸಚಿವರು ಬಜೆಟ್ ನಲ್ಲಿರುವ ಈ ಕೆಳಗಿನ ಅಂಶಗಳ ಬಗ್ಗೆ ಒತ್ತು ನೀಡಿ ಪ್ರತಿಕ್ರಿಯಿಸಿದ್ದಾರೆ.

ಪಿಎಂ ಧನಧಾನ್ಯ ಯೋಜನೆ ಭಾರತೀಯ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಹೆಜ್ಜೆ. ದೇಶೀಯ ಕೃಷಿಗೆ ವಿಶ್ವದರ್ಜೆಯ ಮೂಲಸೌಕರ್ಯ, ಕೃಷಿ ಉತ್ಪನ್ನಗಳ ದಾಸ್ತಾನಿಗೆ ಅತ್ಯುತ್ತಮ ವ್ಯವಸ್ಥೆ, ರಫ್ತಿಗೆ ಉತ್ತೇಜನ, ರೈತರಿಗೆ ಹೆಚ್ಚು ಆದಾಯ ಮತ್ತು ಗ್ರಾಮ ಭಾರತಕ್ಕೆ ಬಲ ನೀಡಲಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿ ₹3ರಿಂದ ₹5 ಲಕ್ಷಕ್ಕೆ ಹೆಚ್ಚಳದಿಂದ ಹೈನುಗಾರರು, ಮೀನುಗಾರರು ಸೇರಿ ಎಲ್ಲಾ ಕೃಷಿಕರಿಗೆ ಸುಲಭ ಸಾಲ ದೊರೆಯಲಿದೆ.

ಕೃಷಿ ತಂತ್ರಜ್ಞಾನ ಹಾಗೂ ಕೃಷಿ ಆಧಾರಿತ ಸ್ಟಾರ್ ಟಪ್ ಗಳ ಉತ್ತೇಜನಕ್ಕೆ ₹1 ಲಕ್ಷ ಕೋಟಿ ಮೀಸಲು ಇಟ್ಟಿರುವುದು ಸ್ವಾಗತಾರ್ಹ. ಕೃತಕ ಬುದ್ಧಿಮತ್ತೆ ಬಳಕೆ ಹಾಗೂ ಅತ್ಯಾಧುನಿಕ ನೀರಾವರಿ ಸೌಲಭ್ಯಕ್ಕೆ ಆದ್ಯತೆ ಕೊಡಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಕೃಷಿ ಮೂಲಸೌಕರ್ಯಗಳನ್ನು ಉತ್ತಮಪಡಿಸಲು ಕ್ರಮ ವಹಿಸಲಾಗಿದೆ. ಅತ್ಯುತ್ತಮ ಶೀತಲೀಕರಣ ಕೇಂದ್ರಗಳ ಸ್ಥಾಪನೆ, ಸುಲಭ-ಪರಿಣಾಮಕಾರಿ ಸಂಪರ್ಕ ವ್ಯವಸ್ಥೆ, ಅತ್ಯುತ್ತಮ ಪೂರೈಕೆ ಸರಪಳಿಗೆ ಆದ್ಯತೆ ನೀಡಲಾಗಿದೆ.

ಪಿಎಂ ಫಸಲ್ ಭೀಮಾ ಯೋಜನೆ ವ್ಯಾಪ್ತಿಗೆ ಇನ್ನೂ ಹೆಚ್ಚಿನ ರೈತರು ಒಳಗೊಳ್ಳಲಿದ್ದಾರೆ. ಫಸಲು ನಷ್ಟ ಉಂಟಾದ ಸಂದರ್ಭದಲ್ಲಿ ಶೀಘ್ರಗತಿಯಲ್ಲಿ ವಿಮಾ ಸೌಲಭ್ಯ ಸಿಗುವಂತೆ ಮಾಡುವುದು ಹಾಗೂ ಅನ್ನದಾತನ ಸುರಕ್ಷತೆಗೆ ಅತಿಹೆಚ್ಚು ಒತ್ತು ಕೊಡುವ ಬಗ್ಗೆ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ.

ಸಹಜ ಹಾಗೂ ನಿಸರ್ಗಕ್ಕೆ ಪೂರಕವಾದ ಕೃಷಿಗೆ ಮನ್ನಣೆ. ಅಂತಹ ರೈತರಿಗೆ ಎಲ್ಲಾ ರೀತಿಯ ಉತ್ತೇಜನ ನೀಡುವ ಬಗ್ಗೆ ಬಜೆಟ್ ನಲ್ಲಿ ಭರವಸೆ ಕೊಡಲಾಗಿದೆ.

ಪ್ರಧಾನಿಗಳ ಕನಸು ವಿಕಸಿತ ಭಾರತ ಸಾಕಾರಕ್ಕೆ ವಿತ್ತ ಸಚಿವರು ಮಂಡಿಸಿರುವ ಆಯವ್ಯಯ ಮಹತ್ವದ ಕೊಡುಗೆ ನೀಡಲಿದೆ. ಭವಿಷ್ಯದಲ್ಲಿ ಭಾರತೀಯ ಕೃಷಿ ಕ್ಷೇತ್ರ ಮತ್ತಷ್ಟು ಸಮೃದ್ಧಿಯಾಗಲಿದೆ ಎಂದು ಸಚಿವರು ಹೇಳಿದ್ದಾರೆ.