ಬೆಂಗಳೂರು: ರಾಮ ಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಮತ್ತು ಸಾವಿರಾರು ರೂ. ನಗದು ದೋಚಿದ್ದ ಆರೋಪಿಯನ್ನು ಶಂಕರಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಂಕರಪುರ ನಿವಾಸಿ ಅಫ್ರಿದಿ (32) ಬಂಧಿತ ಆರೋಪಿ.
ಸೆ.28 ರಂದು ಸಂಜೆ 4 ಗಂಟೆ ಸುಮಾರಿಗೆ ಬಸವನ ಗುಡಿಯ ಉತ್ತರಾಧಿಮಠ ರಸ್ತೆಯಲ್ಲಿರುವ ಸಮೀರ್ ಆರ್. ಕಟ್ಟಿ ಎಂಬುವರ ಮನೆಯಲ್ಲಿ 20 ಗ್ರಾಂ ಬಂಗಾರ ಮತ್ತು 67 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಸೆ.28 ರಂದು ಏಕಾದಶಿ ಪ್ರಯುಕ್ತ ಸಮೀರ್ ಅವರ ತಾಯಿ ಹಾಗೂ ಅವರ ಸ್ನೇಹಿತೆಯರು ಅಡುಗೆ ಕೋಣೆಯಲ್ಲಿ ರಾಮಭಜನೆ ಮಾಡುತ್ತಿದ್ದರು. ಸಮೀರ್ ಮೊದಲನೇ ಮಹಡಿಯಲ್ಲಿರುವ ತಮ್ಮ ಕೋಣೆಯಲ್ಲಿದ್ದರು. ಈ ಸಮಯದಲ್ಲಿ ಮನೆಯೊಳಗೆ ಪ್ರವೇಶಿಸಿದ ಆರೋಪಿ, ಸಮೀರ್ ತಂದೆ ಇರುವ ಕೋಣೆಯ ಒಳಗೆ ಹೋಗಿದ್ದಾನೆ. ಗಾಢ ನಿದ್ರೆಯಲ್ಲಿ ಅವರನ್ನು ನೋಡಿ, ರೂಂನಲ್ಲಿದ್ದ ಮೊಬೈಲ್ ಮತ್ತು 67,500 ರೂ. ನಗದು ಹಾಗೂ 12 ಗ್ರಾಂ ಚಿನ್ನದ ಉಂಗುರ ಹಾಗೂ 8 ಗ್ರಾಂನ ಒಂದು ಚಿನ್ನದ ನಾಣ್ಯವನ್ನು ಕದ್ದು ಪರಾರಿಯಾಗಿದ್ದ. ಆರೋಪಿ ಚಲನವಲನ ಮನೆಯಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು ಎಂದು ಪೊಲೀಸರು ಹೇಳಿದರು.