ಉಡುಪಿ: ಇಬ್ಬರು ಬುರ್ಖಾಧಾರಿ ಮಹಿಳೆಯರು ಮಗುವನ್ನು ಅಪಹರಿಸಲು ಯತ್ನಿಸಿರುವುದು ಉಡುಪಿಯ ಕಾಪು ತಾಲೂಕಿನ ಬೆಳಪು ಗ್ರಾಮದಲ್ಲಿ ನಡೆದಿದೆ. ಈ ವೇಳೆ, ತಡೆಯಲು ಬಂದ ಮಗುವಿನ ತಾಯಿಗೆ ಬುರ್ಖಾಧಾರಿ ಮಹಿಳೆಯರು ಚಾಕು ಇರಿದಿದ್ದಾರೆ.
ಘಟನೆ ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನತಾ ಕಾಲೋನಿಯಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಮೊಹಮ್ಮದ್ ಅಲಿ ಅವರ ಮನೆಗೆ ಆನುರೂಪವಾಗಿ ಶೌಚಾಲಯ ಬಳಸುವ ನೆಪದಲ್ಲಿ ಇಬ್ಬರು ಬುರ್ಖಾ ಧರಿಸಿದ ಮಹಿಳೆಯರು ಪ್ರವೇಶಿಸಿದರೆಂದು ವರದಿಯಾಗಿದೆ. ಆ ಸಮಯದಲ್ಲಿ ಮನೆಯೊಳಗಿನ ತೊಟ್ಟಿಲಿನಲ್ಲಿ ಮಗು ಮಲಗಿತ್ತು. ಮಹಿಳೆಯರಲ್ಲಿ ಒಬ್ಬರು ಮಗುವನ್ನು ಎತ್ತಿಕೊಂಡು ಹೊರಗೆ ಓಡಲು ಯತ್ನಿಸಿದ್ದಾರೆ.
ಈ ದೃಶ್ಯವನ್ನು ಗಮನಿಸಿದ ಮಗುವಿನ ತಾಯಿ ತಾಬರಿಸ್ ತಕ್ಷಣವೇ ಪ್ರತಿಕ್ರಿಯಿಸಿ ಆ ಮಹಿಳೆಯನ್ನು ತಡೆಯಲು ಮುಂದಾದಾಗ, ಇನ್ನೊಬ್ಬ ಬುರ್ಖಾಧಾರಿ ಮಹಿಳೆ ಚಾಕು ಇರಿದು ತಾಯಿಗೆ ಗಾಯಗೊಳಿಸಿದ್ದಾಳೆ. ಗಾಯಗೊಂಡ ತಾಯಿ ಮಗುವನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೂ, ಆರೋಪಿ ಮಹಿಳೆಯರು ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆಯ ಮಾಹಿತಿ ಲಭಿಸುತ್ತಿದ್ದಂತೆಯೇ ಶಿರ್ವ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳ ಪರಿಶೀಲನೆಯ ವೇಳೆ ಬುರ್ಖಾ ಮತ್ತು ಇತರ ಕೆಲವು ಗುರ್ತಿನಿಶಾನೆಗಳು ರೈಲ್ವೇ ಹಳಿ ಬಳಿ ಪತ್ತೆಯಾಗಿವೆ. ಪೊಲೀಸರು ಇಂದು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿ ಮಹಿಳೆಯರ ಪತ್ತೆಗೆ ತನಿಖೆ ವಿಸ್ತರಿಸಿದ್ದಾರೆ.














