ಮನೆ ಅಪರಾಧ ಉದ್ಯಮಿ​ ಆತ್ಮಹತ್ಯೆ ಪ್ರಕರಣ: ಮೊದಲನೇ ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಉದ್ಯಮಿ​ ಆತ್ಮಹತ್ಯೆ ಪ್ರಕರಣ: ಮೊದಲನೇ ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿ ವಜಾ

0

ಮೈಸೂರು : ಉದ್ಯಮಿ ಶರತ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪ್ರಕರಣದ ಮೊದಲ ಆರೋಪಿ ಪ್ರವೀಣ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ.

ನಗರದ ನಾಲ್ಕನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ದೇವರಾಜ್ ಅವರು, ಪ್ರಕರಣದ ಮೊದಲ ಆರೋಪಿ ಪ್ರವೀಣ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ.

ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್​ ಅಧ್ಯಕ್ಷ‌ ಅಪ್ಪಣ್ಣ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. ಡೆತ್‌ನೋಟ್‌ನಲ್ಲಿ ಅಣ್ಣಪ್ಪನ ಹೆಸರು ಬರೆದು ಮೈಸೂರಿನ ಗಣೇಶ ನಗರದ ನಿವಾಸಿ ಉದ್ಯಮಿ ಶರತ್‌ ಏಪ್ರಿಲ್ 18ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು. ಘಟನೆಗೆ ಸಂಬಂಧಿಸಿದಂತೆ ಮೈಸೂರಿನ ಎನ್.ಆರ್ ಪೊಲೀಸ್ ಠಾಣೆಯಲ್ಲಿ ಅಪ್ಪಣ್ಣ ಹಾಗೂ ಪ್ರವೀಣ್ ಎಂಬುವರ ಮೇಲೆ ಎಫ್‌ಐಆರ್ ದಾಖಲಾಗಿತ್ತು.
ಜಂಗಲ್‌ ಲಾಡ್ಜ್​ ಮತ್ತು ರೆಸಾರ್ಟ್‌ನ ಅಧ್ಯಕ್ಷರಾಗಿರುವ ಅಪ್ಪಣ್ಣ, ಉದ್ಯಮಿ ಶರತ್‌ ಅವರಿಂದ 8 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಆದರೆ, ಸಾಲವನ್ನು ವಾಪಸ್‌ ಕೊಟ್ಟಿರಲಿಲ್ಲ. ಪ್ರವೀಣ್‌ ಎಂಬಾತ ಕೂಡ ಇವರಿಗೆ ಪಾಲುದಾರಿಕೆಯಲ್ಲಿ ವಂಚನೆ ಮಾಡಿದ್ದ. ಒಂದೆಡೆ ಪಾಲುದಾರಿಕೆಯಲ್ಲಿ ವಂಚನೆ ಮತ್ತೊಂದೆಡೆ ಸಾಲ ಪಡೆದ ಅಪ್ಪಣ್ಣನಿಂದಲೂ ವಂಚನೆ ಆರೋಪ ಕೇಳಿ ಬಂದಿತ್ತು. ಇದರಿಂದ ಬೇಸತ್ತು ಶರತ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್‌ನಲ್ಲಿ ಪ್ರವೀಣ್ ಹಾಗೂ ಅಪ್ಪಣ್ಣ ಹೆಸರನ್ನು ಅವರು ಉಲ್ಲೇಖಿಸಿದ್ದು, ಇವರಿಬ್ಬರ ಮೇಲೂ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆ ಎನ್.ಆರ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಶರತ್ ಪತ್ನಿ ಕೃಪಾಲಿನಿ ದೂರು ದಾಖಲಿಸಿದ್ದಾರೆ.