ಮುಸ್ಲಿಂ ಹೆಣ್ಣು ಮಕ್ಕಳೆಲ್ಲರೂ ಹಿಜಾಬ್ ಧರಿಸುವುದಿಲ್ಲ. ಹಿಜಾಬ್ ಧರಿಸುವವರು ಧರಿಸಲಿ, ಧರಿಸದವರ ಮೇಲೆ ಒತ್ತಡ ಹಾಕುವುದು ಬೇಡ ಎಂದು ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಣ್ಮಕ್ಕಳು ಮುಖ ಮುಚ್ಕೊಂಡು ಬಂದರೆ ನಿಮಗೇನು ತೊಂದರೆ? ಅವರು ಮುಖ ತೋರಿಸಿದರೆ ನಿಮಗೇನು ಆನಂದ? ಅವರೇನು ಬ್ಯೂಟಿ ಕಾಂಟೆಸ್ಟ್ ಗೆ ಬರ್ತಾರಾ? ವಿದ್ಯೆ ಕಲಿಯಲು ಬರ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಸರ್ಕಾರ ವಿವಾದಗಳನ್ನು ಸೃಷ್ಟಿಸುವಲ್ಲಿ ಮುಂಚೂಣಿಯಲ್ಲಿದೆ. ವಿವಾದಗಳನ್ನು ಸೃಷ್ಟಿಸಿದ್ದರೂ ಅದರಲ್ಲಿ ಸಫಲತೆ ಪಡೆಯಲು ಅವರಿಂದ ಆಗುತ್ತಿಲ್ಲ. ಈಗ ಹಿಜಾಬ್ ವಿವಾದವನ್ನು ತಂದಿದ್ದಾರೆ. ಮೈಸೂರು ಮಹಾರಾಜರ ಕಾಲದಲ್ಲಿಯೂ ಹಿಜಾಬ್ ಇತ್ತು. ಮಾರವಾಡಿ ಸಮಾಜದಲ್ಲಿ ಮುಖದ ಮೇಲೆ ಪರದೆ ಹಾಕಿಕೊಳ್ಳುತ್ತಾರೆ. ಉತ್ತರ ಕರ್ನಾಟಕದಲ್ಲಿ ನಮ್ಮ ಹೆಣ್ಣು ಮಕ್ಕಳು ತಲೆ ಮೇಲೆ ಸೀರೆ ಸೆರಗಿಲ್ಲದೆ ಹೊರಗೆ ಬರಲ್ಲ. ಇದೆಲ್ಲ ನಮ್ಮ ಸಂಪ್ರದಾಯವಾಗಿದೆ ಎಂದು ಹೇಳಿದ್ದಾರೆ.
ಹಿಜಾಬ್ ಮಾಸ್ಕ್ ಇದ್ದಂಗೆ ಇರುತ್ತದೆ. ಸಿಎಂ ಬೊಮ್ಮಾಯಿ ಹಿಜಾಬ್ ಹಾಕಿಕೊಂಡಿದ್ದಾರೆ. ಸಚಿವರು ಹಿಜಾಬ್ ಹಾಕಿದ್ದಾರೆ, ನಾವು ಹಿಜಾಬ್ ಹಾಕಿಕೊಂಡಿದ್ದೇವೆ. ಯಾಕೆ ಹಾಕಿಕೊಂಡಿದ್ದೇವೆ? ಕೊರೊನಾದಿಂದ ಬಚಾವಾಗಲು ಹಾಕಿಕೊಂಡಿದ್ದೇವೆ. ಅವರು ಚಳಿಯಿಂದ ರಕ್ಷಣೆ ಪಡೆಯಲು ಹಿಜಾಬ್ ಹಾಕಿಕೊಂಡಿದ್ದಾರೆ. ಕೋರ್ಟ್ ತೀರ್ಪು ಬರುವವರೆಗೆ, ಸಮವಸ್ತ್ರ ಕಡ್ಡಾಯ ಮಾಡುವವರೆಗೆ ಹಿಜಾಬ್ ಧರಿಸಲು ಅವಕಾಶ ಕೊಡಿ ಎಂದಿದ್ದಾರೆ.
ಎಲ್ಲವೂ ಪರಿಹಾರವಾಗುವವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಇದೇ ಸಂದರ್ಭದಲ್ಲಿ ಸಿ.ಎಂ.ಇಬ್ರಾಹಿಂ ಮನವಿ ಮಾಡಿಕೊಂಡರು.