ಬೆಂಗಳೂರು: ಕಳೆದ ಎರಡು ದಿನಗಳ ಕಾಲ ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಜೊತೆ ನಡೆದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಭೆ ಯಶಸ್ವಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ಸೇರಲಿರುವ 24 ಮಂದಿ ಸಚಿವರ ಪಟ್ಟಿ ಅಂತಿಮಗೊಂಡಿದೆ.
ನೂತನ ಸಚಿವರ ಪ್ರಮಾಣವಚನ ಸಮಾರಂಭ ಇಂದು (ಶನಿವಾರ) ಬೆಳಿಗ್ಗೆ 11.45ಕ್ಕೆ ರಾಜಭವನದಲ್ಲಿ ನಡೆಯಲಿದೆ. ಪ್ರಮಾಣವಚನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ರಾಜಭವನಕ್ಕೆ ಶುಕ್ರವಾರ ಮಧ್ಯಾಹ್ನವೇ ಮುಖ್ಯಮಂತ್ರಿ ಸಚಿವಾಲಯ ಸಂದೇಶ ರವಾನಿಸಿತ್ತು. ನೂತನ ಸಚಿವರ ಪಟ್ಟಿಯನ್ನು ಶುಕ್ರವಾರ ರಾತ್ರಿ ರಾಜಭವನಕ್ಕೆ ಕಳುಹಿಸಲಾಗಿದೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಹಾಗೂ ಎಂಟು ಶಾಸಕರು ಸಚಿವರಾಗಿ ಕಳೆದ ಶನಿವಾರ ಪ್ರಮಾಣವಚನ ಸ್ವೀಕರಿಸಿದ್ದರು. ಸಚಿವ ಸಂಪುಟದಲ್ಲಿ ಒಟ್ಟು 34 ಮಂದಿಯ ಸೇರ್ಪಡೆಗೆ ಅವಕಾಶ ಇದೆ. 24 ಮಂದಿಯ ಸೇರ್ಪಡೆಯಿಂದ ಸಂಪುಟ ಭರ್ತಿಯಾದಂತೆ ಆಗುತ್ತದೆ.
ಎರಡು ವರ್ಷದ ಬಳಿಕ ಸಂಪುಟ ಪುನಾರಚರಣೆ ಮಾಡಿ ನಿಮಗೆ ಅವಕಾಶ ನೀಡಲಾಗುತ್ತದೆ ಎಂದು ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಸಚಿವ ಸ್ಥಾನ ಕೈ ತಪ್ಪಿದ ಕೂಡಲೇ ಕೆಲವು ಶಾಸಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಾತಿವಾರು ಮತ್ತು ಪ್ರಾದೇಶಿಕ ಪ್ರಾತಿನಿಧ್ಯದ ಜತೆಗೆ ಸಾಮಾಜಿಕ ನ್ಯಾಯದ ಮಾನದಂಡದಲ್ಲಿ ಹಿರಿಯ ಹಾಗೂ ಕಿರಿಯ ಶಾಸಕರನ್ನು ಸಂಪುಟಕ್ಕೆ ಆಯ್ಕೆ ಮಾಡಿಕೊಳ್ಳುವ ಮೂಲಕ ಸಮತೋಲನ ಕಾಪಾಡಲಾಗಿದೆ ಎಂದು ಮುಖ್ಯಮಂತ್ರಿ ಪ್ರತಿಪಾದಿಸಿದ್ದಾರೆ.
ನೂತನ ಸಚಿವರ ಪಟ್ಟಿ
- ಹೆಚ್.ಕೆ.ಪಾಟೀಲ್
- ಕೃಷ್ಣಭೈರೇಗೌಡ
- ಚಲುವರಾಯಸ್ವಾಮಿ
- ಪಿರಿಯಾಪಟ್ಟಣ ವೆಂಕಟೇಶ್
- ಡಾ.ಹೆಚ್.ಸಿ.ಮಹದೇವಪ್ಪ
- ಈಶ್ವರ ಖಂಡ್ರೆ
- ಕೆ.ಎನ್.ರಾಜಣ್ಣ
- ದಿನೇಶ್ ಗುಂಡೂರಾವ್
- ಶರಣಬಸಪ್ಪ ದರ್ಶನಾಪುರ
- ಶಿವಾನಂದ ಪಾಟೀಲ್
- ಆರ್.ಬಿ.ತಿಮ್ಮಾಪುರ
- ಎಸ್.ಎಸ್.ಮಲ್ಲಿಕಾರ್ಜುನ
- ಶಿವರಾಜ ತಂಗಡಗಿ
- ಡಾ.ಶರಣ ಪ್ರಕಾಶ್ ಪಾಟೀಲ್
- ಮಂಕಾಳು ವೈದ್ಯ
- ಲಕ್ಷ್ಮೀ ಹೆಬ್ಬಾಳ್ಕರ್
- ರಹೀಂ ಖಾನ್
- ಡಿ.ಸುಧಾಕರ್
- ಸಂತೋಷ್ ಲಾಡ್
- ಬೋಸರಾಜು
- ಬಿ.ಎಸ್.ಸುರೇಶ್
- ಮಧು ಬಂಗಾರಪ್ಪ
- ಎಂ.ಸಿ.ಸುಧಾಕರ್
- ಬಿ.ನಾಗೇಂದ್ರ
ರಾಜಭವನ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್
ರಾಜಭವನ ಸುತ್ತಮುತ್ತ ಭದ್ರತೆಗಾಗಿ 2700 ಪೊಲಿಸ್ ಸಿಬ್ಬಂಧಿಯನ್ನು ನಿಯೋಜನೆ ಮಾಡಲಾಗಿದೆ. 17 ಡಿಸಿಪಿ, 37 ಎಸಿಪಿ, 114 ಇನ್ಸ್ ಪೆಕ್ಟರ್ , 208 ಪಿಎಸ್ಐ, ಸೇರಿ 2700 ಪೊಲೀಸರನ್ನು ನಿಯೋಜಿಸಲಾಗಿದೆ. ಮಫ್ತಿಯಲ್ಲೂ 200 ಕ್ಕೂ ಅಧಿಕ ಪೊಲೀಸರು ಕಾರ್ಯ ನಿರ್ವಹಿಸಲಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಡಿಸ್ವಾಟ್, ವಾಟರ್ಜೆಟ್ ನಿಯೋಜನೆ ಮಾಡಲಾಗಿದೆ. ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.