ಬೆಂಗಳೂರು: ಶನಿವಾರ ಮಧ್ಯಾಹ್ನ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಸಂಜೆ ವೇಳೆಗೆ ಖಾತೆ ಹಂಚಿಕೆಯಾಗಲಿದೆ ಎಂದು ಸಚಿವ ಕೆ.ಎಚ್ ಮುನಿಯಪ್ಪ ಶುಕ್ರವಾರ ಹೇಳಿದ್ದಾರೆ.
ದೆಹಲಿಯಿಂದ ವಾಪಸಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿಯಪ್ಪ, ನಾಲ್ಕೈದು ಸಚಿವ ಸ್ಥಾನಗಳನ್ನು ಹೊರತುಪಡಿಸಿ ಉಳಿದ ಸ್ಥಾನಗಳನ್ನು ಒಂದೇ ದಿನದಲ್ಲಿ ಭರ್ತಿ ಮಾಡಲಾಗುವುದು ಎಂದು ಹೇಳಿದರು.
ಸಚಿವ ಸಂಪುಟವು ಹಿರಿಯರು ಮತ್ತು ಯುವ ಜನರ ಮಿಶ್ರಣವಾಗಿದೆ. ನಾಳೆ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಸಮಯವೂ ನಿಗದಿಯಾಗಿದೆ. ಬಹುತೇಕ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದರು.
ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ಹಿರಿಯ ನಾಯಕರು ಪಕ್ಷದ ಹೈಕಮಾಂಡ್ ಮುಂದೆ ಏನಾದರೂ ಬೇಡಿಕೆ ಇಟ್ಟಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮುನಿಯಪ್ಪ, ಈ ಹೊತ್ತಿನಲ್ಲಿ ಏನನ್ನೂ ಹೇಳುವುದು ಕಷ್ಟ. ಆದರೆ, ನಮಗೆ ಹಿರಿಯರು ಹಾಗೂ ಯುವಕರು ಇಬ್ಬರೂ ಬೇಕು. ಎರಡನ್ನೂ ಸಮತೋಲನದಲ್ಲಿಟ್ಟುಕೊಳ್ಳಬೇಕು ಎಂದು ಅವರು ಹೇಳಿದರು.
ಯಾವ ಖಾತೆಯನ್ನು ಯಾರಿಗೆ ನೀಡಬೇಕು ಎನ್ನುವುದನ್ನು ನಾಳೆ ನಿರ್ಧರಿಸಲಾಗುವುದು. ಶನಿವಾರ ಸಂಜೆಯೊಳಗೆ ಖಾತೆ ಹಂಚಿಕೆಯನ್ನು ಪ್ರಕಟಿಸಬೇಕಾಗಿದೆ ಎಂದರು.