ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಸಿಕ್ಕಿ ಬಿದ್ದಿರುವ ಅಬ್ದುಲ್ ಮತೀನ್ ತಾಹಾ ಮತ್ತು ಮುಸಾವೀರ್ ಹುಸೇನ್ ಶಾಜೀಬ್ನನ್ನು ಪಶ್ಚಿಮಬಂಗಾಲದಿಂದ ಬೆಂಗಳೂರಿಗೆ ಕರೆತರುವ ಪ್ರಕ್ರಿಯೆಗಳು ನಡೆದಿದ್ದು, ಅತಿ ಶೀಘ್ರದಲ್ಲೇ ಬೆಂಗಳೂರಿಗೆ ಬರಬಹುದು ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆರೋಪಿಗಳ ಬಂಧನವನ್ನು ಎನ್ಐಎ ಅಧಿಕಾರಿಗಳು ಖಚಿತಪಡಿಸಿದ್ದು, ಮುಂದಿನ ತನಿಖೆಯಲ್ಲಿ ಇನ್ನಷ್ಟು ಮಾಹಿತಿ ಸಿಗಲಿದೆ ಎಂದರು.
ತನಿಖೆ ಸಂದರ್ಭದಲ್ಲಿ ನಮ್ಮ ಪೊಲೀಸರು ಸಿಸಿ ಕೆಮರಾ ದೃಶ್ಯಾವಳಿ ಪರಿಶೀಲಿಸಿ, ಆತ ಧರಿಸಿದ್ದ ಬಟ್ಟೆ, ಟೋಪಿ ಸಹಿತ ಅನೇಕ ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಎನ್ಐಎ ಅಧಿಕಾರಿಗಳೊಂದಿಗೆ ಹಂಚಿಕೊಂಡಿದ್ದರು.
ಅಲ್ಲದೆ ಇದೇ ವ್ಯಕ್ತಿಗಳು ಶಿವಮೊಗ್ಗ ಸ್ಫೋಟ ಪ್ರಕರಣದಲ್ಲೂ ಭಾಗಿಯಾಗಿದ್ದರು ಎಂಬ ಗುಮಾನಿ ಇತ್ತು. ತೀರ್ಥಹಳ್ಳಿಯವರು ಎಂಬ ಮಾಹಿತಿ ಇತ್ತು. ಎಲ್ಲ ಮಾಹಿತಿಯನ್ನೂ ಎನ್ಐಎ ಅಧಿಕಾರಿಗಳಿಗೆ ನೀಡಿದ್ದರು ಎಂದು ಹೇಳಿದರು.
ಈ ಆರೋಪಿಗಳು ಕಳೆದ ನಾಲ್ಕೂವರೆ ವರ್ಷಗಳಿಂದ ಬೇರೆ ಬೇರೆ ಪ್ರಕರಣಗಳಲ್ಲಿ ತಪ್ಪಿಸಿಕೊಂಡು ಓಡಾಡುತ್ತಿದ್ದರು. ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಇಷ್ಟು ಶೀಘ್ರವಾಗಿ ಹಿಡಿಯುವ ಕೆಲಸವನ್ನು ನಮ್ಮ ಪೊಲೀಸರು ಮತ್ತು ಎನ್ಐಎ ಅಧಿಕಾರಿಗಳು ಮಾಡಿದ್ದಾರೆ. ಇದೊಂದು ಉತ್ತಮ ಕೆಲಸ, ಅಧಿಕಾರಿಗಳಿಗೆ ರಾಜ್ಯ ಸರಕಾರದ ಪರವಾಗಿ ಅಭಿನಂದನೆ ತಿಳಿಸುತ್ತೇನೆ ಎಂದರು.