ಮನೆ ಅಪರಾಧ ಹೆಜ್ಜಾಲ ಚೆಕ್‌ ಪೋಸ್ಟ್‌ ನಲ್ಲಿ 19 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ವಶಕ್ಕೆ

ಹೆಜ್ಜಾಲ ಚೆಕ್‌ ಪೋಸ್ಟ್‌ ನಲ್ಲಿ 19 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ವಶಕ್ಕೆ

0

ರಾಮನಗರ:  ಸೂಕ್ತ ದಾಖಲೆ ಇಲ್ಲದೆ ಸಾಗಣೆ ಮಾಡುತ್ತಿದ್ದ ಮಲಬಾರ್ ಗೋಲ್ಡ್ ಕಂಪನಿಗೆ ಸೇರಿದ ₹19 ಕೋಟಿ ಮೌಲ್ಯದ 29 ಕೆ.ಜಿ ಚಿನ್ನಾಭರಣ ಮತ್ತು 28 ಕೆ.ಜಿ ಬೆಳ್ಳಿ ಆಭರಣವನ್ನು ತಾಲ್ಲೂಕಿನ ಹೆಜ್ಜಾಲ ಬಳಿಯ ಚೆಕ್‌ಪೋಸ್ಟ್‌ನಲ್ಲಿ ಚುನಾವಣಾ ಸಿಬ್ಬಂದಿ ಶುಕ್ರವಾರ ವಶಕ್ಕೆ ಪಡೆದಿದ್ದಾರೆ.

Join Our Whatsapp Group

ಈ ಕುರಿತು ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಧ್ಯಾಹ್ನ ಚೆಕ್‌ಪೋಸ್ಟ್ ಸಿಬ್ಬಂದಿ ವಾಹನ ತಡೆದು ಪರಿಶೀಲನೆ ನಡೆಸಿದಾಗ, ಅದರೊಳಗೆ ಚಿನ್ನ ಮತ್ತು ಬೆಳ್ಳಿ ಆಭರಣವಿರುವುದು ಪತ್ತೆಯಾಗಿದೆ. ಮೈಸೂರಿನಲ್ಲಿರುವ ಮಲಬಾರ್‌ ನ ಮಳಿಗೆಗಳಿಗೆ ಬೆಂಗಳೂರಿನಿಂದ ಪ್ಯಾಕ್ ಮಾಡಿದ ಬಾಕ್ಸ್‌ಗಳಲ್ಲಿ ಆಭರಣಗಳನ್ನು ಕೊಂಡೊಯ್ಯುತ್ತಿರುವುದಾಗಿ ಕಂಪನಿಯ ಸಿಬ್ಬಂದಿ ಹೇಳಿದ್ದಾರೆ  ಎಂದು ಮಾಗಡಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ರಮೇಶ್ ತಿಳಿಸಿದರು.

ಕಂಪನಿ ಸಿಬ್ಬಂದಿ ತೋರಿಸಿದ ದಾಖಲೆಗಳು ಮತ್ತು ಜಿಎಸ್‌ ಟಿ ಬಿಲ್‌ ನಲ್ಲಿ ವ್ಯತ್ಯಾಸ ಕಂಡುಬಂತು. ಆಗ ವಾಣಿಜ್ಯ ತೆರಿಗೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ, ಎಲ್ಲಿಂದ ತರಲಾಗಿದೆ, ಎಲ್ಲೆಲ್ಲಿಗೆ ಕೊಂಡೊಯ್ಯಲಾಗುತ್ತಿದೆ ಎಂಬುದನ್ನು ವಿಚಾರಿಸಲಾಯಿತು. ಚಿನ್ನ ಮತ್ತು ಬೆಳ್ಳಿಯನ್ನು ತೂಕದ ಯಂತ್ರದಲ್ಲಿ ಮತ್ತೊಮ್ಮೆ ತೂಕ ಮಾಡಿ ಪರಿಶೀಲಿಸಲಾಯಿತು’ ಎಂದು ಹೇಳಿದರು.

ಅಧಿಕಾರಿಗಳ ಪ್ರಶ್ನೆಗೆ ಕಂಪನಿ ಸಿಬ್ಬಂದಿ ಸರಿಯಾದ ಸ್ಪಷ್ಟನೆ ನೀಡಿಲ್ಲ. ಅಗತ್ಯ ದಾಖಲೆಗಳನ್ನು ಸಹ ತೋರಿಸಿಲ್ಲ. ಹಾಗಾಗಿ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಬಿಡದಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದು, ಪ್ರಕರಣ ದಾಖಲಿಸಲಾಗಿದೆ. ಸಂಬಂಧಪಟ್ಟವರು ಅಗತ್ಯ ದಾಖಲೆ ತೋರಿಸಿ ಬಿಡಿಸಿಕೊಂಡು ಹೋಗಬೇಕು. ಇಲ್ಲದಿದ್ದರೆ, ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು  ಎಂದು ತಿಳಿಸಿದರು.

ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ₹50 ಸಾವಿರಕ್ಕಿಂತ ಹೆಚ್ಚಿನ ನಗದು ಸಾಗಿಸಬೇಕಾದರೆ ಸಂಬಂಧಪಟ್ಟ ಚುನಾವಣಾಧಿಕಾರಿಯ ಅನುಮತಿ ಪಡೆಯಬೇಕು. ಚಿನ್ನ ಮತ್ತು ಬೆಳ್ಳಿಯನ್ನು ಸಾಗಿಸುವಾಗ ಸೂಕ್ತ ದಾಖಲೆಗಳನ್ನು ಇಟ್ಟುಕೊಂಡಿರಬೇಕು. ಚೆಕ್‌ಪೋಸ್ಟ್‌ಗಳಲ್ಲಿ ಪರಿಶೀಲನೆ ನಡೆಸಿದಾಗ ತೋರಿಸಬೇಕು  ಎಂದು ಹೇಳಿದರು.

ಹಿಂದಿನ ಲೇಖನಧಾರವಾಡದಲ್ಲಿ ಬೈಕ್ ಅಪಘಾತ: ಕಾರಾಗೃಹ ಸಿಬ್ಬಂದಿ ಸಾವು
ಮುಂದಿನ ಲೇಖನಕೆಫೆ ಸ್ಫೋಟ ಆರೋಪಿಗಳು ಶೀಘ್ರ ಬೆಂಗಳೂರಿಗೆ: ಗೃಹಸಚಿವ ಡಾ. ಜಿ. ಪರಮೇಶ್ವರ್‌