ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಇರುವುದರಿಂದ ಸಿಬ್ಬಂದಿ ಮುಷ್ಕರ ಕೈಬಿಡಿ. ಒಂದು ವೇಳೆ ಮುಷ್ಕರ ಕೈಬಿಡಿದಿದ್ದರೆ ನಾವು ಪರ್ಯಾಯ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಧರಣಿ ನಿರತ 108 ಆ್ಯಂಬುಲೆನ್ಸ್ ಚಾಲಕರಿಗೆ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಬಳಿ ಬೇರೆ ಚಾಲಕರಿದ್ದಾರೆ, ಅವರನ್ನು ಸೇವೆಗೆ ಬಳಸಿಕೊಳುತ್ತೇವೆ ಎಂದು ಹೇಳಿದ್ದಾರೆ.
ಸಿಬ್ಬಂದಿಗೆ ಸಂಬಳ ನೀಡಲು ಸರ್ಕಾರದ ಬಳಿ ಹಣದ ಕೊರತೆ ಇಲ್ಲ. 108 ಆ್ಯಂಬುಲೆನ್ಸ್ ಚಾಲಕರಿಗೆ ಪೂರ್ತಿ ಹಣ ನೀಡಿದ್ದೇವೆ. ವೇತನ ನೀಡುವಲ್ಲಿ ಸಣ್ಣ ಸಮಸ್ಯೆಯಾಗಿತ್ತು ಆದರೆ ಸಂಬಳ ಕೊರತೆ ಮಾಡಿಲ್ಲ. ಇದು ಚುನಾವಣೆ ಸಮಯ, ಈಗ ಯಾವುದೇ ಬದಲಾವಣೆ ಮಾಡುವುದಕ್ಕೆ ಆಗೋದಿಲ್ಲ. ಅಶೋಕ್ ಅವರೇ ನಿಮ್ಮ ಸರ್ಕಾರದ ಅವಧಿಯಲ್ಲೇ ಲೋಪವಾಗಿತ್ತು ಎಂದು ವಾಗ್ದಾಳಿ ಮಾಡಿದ್ದಾರೆ.
ಬಾಕಿ ವೇತನ ಬಿಡುಗಡೆಗೆ 108 ಆ್ಯಂಬುಲೆನ್ಸ್ ಚಾಲಕರ ಆಗ್ರಹ ಹಿನ್ನೆಲೆ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಚಾಲಕರ ಸಭೆ ಮಾಡಿದ್ದು, ಸಂಜೆ 6 ಗಂಟೆವರೆಗೆ ಇಲಾಖೆ ಕಾಲಾವಕಾಶ ಕೇಳಿದೆ. ಬಳಿಕ ತನ್ನ ನಿರ್ಧಾರ ತಿಳಿಸಲಿದೆ. ಇಲಾಖೆ ನಡೆ ಬಳಿಕ ಮುಷ್ಕರದ ಕುರಿತು ಚಾಲಕರಿಂದ ತೀರ್ಮಾನ ಸಾಧ್ಯತೆ ಇದೆ.
ರಾತ್ರಿಯಿಂದಲೇ ಕೆಲಸಕ್ಕೆ ಹಾಜರಾಗದಿರಲು ನಿರ್ಧರಿಸಿದ್ದು, ಈಗಾಗಲೇ ಆರೋಗ್ಯ ಇಲಾಖೆ ಎಸ್ಮಾ ಜಾರಿ ಮಾಡಿದೆ. ಎಸ್ಮಾ ಹಿನ್ನೆಲೆ ಇಲಾಖೆ ನಡೆ ನೋಡಿ ಚಾಲಕರು ತೀರ್ಮಾನ ಮಾಡಲಿದ್ದಾರೆ. ನಾಳೆಯಿಂದ 108 ಆ್ಯಂಬುಲೆನ್ಸ್ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ ಇದೆ.
ತಮ್ಮ ಜೀವ ಪಣಕ್ಕಿಟ್ಟು ಜನರ ಜೀವ ರಕ್ಷಿಸುವ ಈ ಚಾಲಕರಿಗೆ ಸಂಬಳದ ಗ್ಯಾರಂಟಿ ಕೊಡಲು ಸಾಧ್ಯವಾಗಿಲ್ಲ. 3 ತಿಂಗಳಿಂದ ಅವರಿಗೆ ವೇತನ ಪಾವತಿ ಮಾಡಿಲ್ಲ ಎಂದರೆ ನಾಚಿಕೆಗೇಡು ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ಕಿವಿ ಹಿಂಡಿದ್ದಾರೆ.