ಮನೆ ಕಾನೂನು ಪತ್ನಿಯನ್ನು’ಭೂತ’, ‘ಪಿಶಾಚಿ’ ಎನ್ನುವುದು ಐಪಿಸಿ ಸೆಕ್ಷನ್ 498 ಎ ಅಡಿ ಕ್ರೌರ್ಯವಲ್ಲ: ಪಾಟ್ನಾ ಹೈಕೋರ್ಟ್

ಪತ್ನಿಯನ್ನು’ಭೂತ’, ‘ಪಿಶಾಚಿ’ ಎನ್ನುವುದು ಐಪಿಸಿ ಸೆಕ್ಷನ್ 498 ಎ ಅಡಿ ಕ್ರೌರ್ಯವಲ್ಲ: ಪಾಟ್ನಾ ಹೈಕೋರ್ಟ್

0

ಪತಿ ತನ್ನ ಹೆಂಡತಿಯನ್ನು’ಭೂತ’, ‘ಪಿಶಾಚಿ’ ಎಂದು ನಿಂದಿಸುವುದು ಐಪಿಸಿ ಸೆಕ್ಷನ್ 498 ಎ ಅಡಿ (ಪತಿ ಅಥವಾ ಅವನ ಸಂಬಂಧಿಕರಿಂದ ಹೆಂಡತಿಯ ಮೇಲೆ ಕ್ರೌರ್ಯ) ಕ್ರೌರ್ಯ ಎನಿಸದು ಎಂದು ಪಾಟ್ನಾ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.

ವಿವಾಹ ವಿಫಲವಾಗಿದ್ದಾಗ, ನಿಂದನಾ ಭಾಷೆ ಸದಾ ಕ್ರೌರ್ಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಮೂರ್ತಿ ಬಿಬೇಕ್ ಚೌಧರಿ ಒತ್ತಿ ಹೇಳಿದರು.

“ಭೂತ ಮತ್ತು ಪಿಶಾಚಿ ಎಂದು ವ್ಯಕ್ತಿಯನ್ನು ನಿಂದಿಸುವುದು ಕ್ರೌರ್ಯ ಎಂಬುದಾಗಿ 2ನೇ ಪ್ರತಿವಾದಿಯ ಪರ ವಕೀಲರು ಗಂಭೀರ ರೀತಿಯಲ್ಲಿ ಒತ್ತಾಯಿಸಿದರು. ನ್ಯಾಯಾಲಯ ಆ ವಾದವನ್ನು ಒಪ್ಪುವ ಸ್ಥಿತಿಯಲ್ಲಿಲ್ಲ. ವೈವಾಹಿಕ ಸಂಬಂಧಗಳಲ್ಲಿ, ಅದರಲ್ಲಿಯೂ ವಿಫಲವಾದ ವೈವಾಹಿಕ ಸಂಬಂಧಗಳಲ್ಲಿ, ಗಂಡ ಮತ್ತು ಹೆಂಡತಿ ಇಬ್ಬರೂ ನಿಂದನಾ ಭಾಷೆ ಬಳಸಿ ಬೈದಾಡಿಕೊಂಡ ಘಟನೆಗಳಿವೆ. ಆದರೆ ಆ ಎಲ್ಲಾ ಆರೋಪಗಳು ಕ್ರೌರ್ಯದ ಪರಿಧಿಯೊಳಗೆ ಬರುವುದಿಲ್ಲ” ಎಂದು ನ್ಯಾಯಾಲಯ ನುಡಿದಿದೆ.

ಆದ್ದರಿಂದ, ಐಪಿಸಿಯ ಸೆಕ್ಷನ್ 498 ಎ ಅಡಿಯಲ್ಲಿ ವ್ಯಕ್ತಿ ಮತ್ತು ಅವನ ತಂದೆಗೆ ವಿಧಿಸಿದ್ದ ಶಿಕ್ಷೆಯನ್ನು ಅದು ಬದಿಗೆ ಸರಿಸಿದೆ.

ವರದಕ್ಷಿಣೆ (ನಿಗ್ರಹ) ಕಾಯಿದೆಯ ಸೆಕ್ಷನ್ 498 ಎ ಮತ್ತು ಸೆಕ್ಷನ್ 4 (ವರದಕ್ಷಿಣೆಗಾಗಿ ದಂಡ) ಅಡಿಯಲ್ಲಿ ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ವ್ಯಕ್ತಿ ಮತ್ತು ಆತನ ತಂದೆ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ.

ತನ್ನ ಮಗಳಿಂದ ಕಾರನ್ನು ವರದಕ್ಷಿಣೆಯಾಗಿ ಕೇಳಲಾಗಿದೆ ಎಂದು ಆರೋಪಿಸಿ ವ್ಯಕ್ತಿ ಹಾಗೂ ಆತನ ತಂದೆ ವಿರುದ್ಧ ಆತನ ಮಾವ ದೂರು ದಾಖಲಿಸಿದ್ದರು. ಕಾರ್‌ ನೀಡದೇ ಇದ್ದುದರಿಂದ ತನ್ನ ಮಗಳ ಮೇಲೆ ಹಲ್ಲೆ ನಡೆಸಲಾಗಿದೆ ಎಂದಿದ್ದರು.

ನಂತರ ವಿಚಾರಣಾ ನ್ಯಾಯಾಲಯ ತಂದೆ-ಮಗನಿಗೆ ಐಪಿಸಿ ಸೆಕ್ಷನ್ 498 ಎ ಅಡಿಯಲ್ಲಿ ಒಂದು ವರ್ಷ ಕಠಿಣ ಸಜೆ ಮತ್ತು ವರದಕ್ಷಿಣೆ ನಿಷೇಧ ಕಾಯಿದೆಯ ಸೆಕ್ಷನ್ 4ರ ಅಡಿಯಲ್ಲಿ ಆರು ತಿಂಗಳ ಕಠಿಣ ಜೈಲು ಶಿಕ್ಷೆ ಮತ್ತು 1,000 ರೂ ದಂಡ ವಿಧಿಸಿತ್ತು. ಆದೇಶವನ್ನು ಮೇಲ್ಮನವಿ ನ್ಯಾಯಾಲಯ ಎತ್ತಿಹಿಡಿಯಿತು. ಹೀಗಾಗಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.

ಆರೋಪಿಗಳ ವಿರುದ್ಧ ನಿರ್ದಿಷ್ಟ ಆರೋಪ ಇಲ್ಲದಿರುವುದು ಮತ್ತು ಅವರ ವಿರುದ್ಧ ಮಾಡಲಾದ ಸಾಮಾನ್ಯ ಆರೋಪಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಯಾವುದೇ ನಿರ್ದಿಷ್ಟ ಪಾತ್ರವನ್ನು ಆಪಾದಿಸಿಲ್ಲ ಎಂಬ ಅರ್ಜಿದಾರರ ವಾದಕ್ಕೆ ಹೈಕೋರ್ಟ್‌ ತಲೆದೂಗಿದೆ.

ಅದರಂತೆ, ಮರುಪರಿಶೀಲನಾ ಅರ್ಜಿಯನ್ನು ಪುರಸ್ಕರಿಸಿದ ಅದು ವಿಚಾರಣಾ ನ್ಯಾಯಾಲಯವು ನೀಡಿದ ಶಿಕ್ಷೆಯನ್ನು ರದ್ದುಗೊಳಿಸಿತು.

ಹಿಂದಿನ ಲೇಖನವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ
ಮುಂದಿನ ಲೇಖನಜಲ್​ ಪೈಗುರಿ ಜಿಲ್ಲೆಯಲ್ಲಿ ಭೀಕರ ಬಿರುಗಾಳಿ: ಐವರ ಸಾವು, 500ಕ್ಕೂ ಹೆಚ್ಚು ಮಂದಿಗೆ ಗಾಯ