ಕಠ್ಮಂಡು: ಬಾಗ್ಮತಿ ಪ್ರಾಂತ್ಯದ ಸಿಂಧುಲಿ ಜಿಲ್ಲೆಯ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ನಾಲ್ವರು ಭಾರತೀಯ ಪ್ರಜೆಗಳು ಮೃತರಾಗಿದ್ದು, ಒಬ್ಬನಿಗೆ ತೀವ್ರ ಗಾಯಗಳಾಗಿವೆ.
ಐವರು ಭಾರತೀಯರು ಪ್ರಯಾಣ ಮಾಡುತ್ತಿರುವ ಕಾರು ಸಿಂಧುಲಿ ಜಿಲ್ಲೆಯ ಬಳಿ ಹೋಗುತ್ತಿರುವ ವೇಳೆ ಅಪಘಾತಕ್ಕೀಡಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆಯಿಂದ ಸುಮಾರು 500 ಮೀ ಆಚೆಗೆ ಉರುಳಿ ಬಿದ್ದಿದೆ. ಅಪಘಾತದಲ್ಲಿ ಮೃತರಾದವರ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಹಾರ ನೋಂದಣಿಯ ಕಾರು ನೇಪಾಳದ ರಾಜಧಾನಿ ಕಠ್ಮಂಡು ಕಡೆಗೆ ಹೋಗುತಿತ್ತು. ಸಾಗುವ ದಾರಿಯಲ್ಲಿ ಅಪಘಾತ ಸಂಭವಿಸಿದ್ದು ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರ ಗಾಯಗಳಾಗಿರುವ ಇಬ್ಬರನ್ನು ಆಸ್ಪತ್ರೆಗೆ ಸೇರಿದ್ದು, ಅದರಲ್ಲಿ ಒಬ್ಬನು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜ್ ಕುಮಾರ್ ಸಿಲ್ವಾಲ್ ತಿಳಿಸಿದ್ದಾರೆ.
ಅಪಘಾತ ನಡೆದ ಸ್ಥಳವು ತುಂಬ ದುರ್ಗಮವಾಗಿದ್ದು, ಮೃತದೇಹಗಳನ್ನು ತೆಗೆಯಲಾಗದಷ್ಟು ಮಟ್ಟಿಗೆ ಪರಿಸ್ಥಿತಿಯಿದೆ. ಸ್ಥಳಕ್ಕೆ ತಲುಪಲು ಸುಮಾರು 1 ಗಂಟೆ ತೆಗೆದುಕೊಳ್ಳುತ್ತದೆ. ಮೃತದೇಹಗಳನ್ನು ಹೊರ ತೆಗೆಯಲು ನೇಪಾಳದ ಸೇನೆಯ ಸಹಾಯವನ್ನು ಕೇಳಿದ್ದೇವೆ ಎಂದು ರಾಜ್ ಕುಮಾರ್ ಸಿಲ್ವಾಲ್ ತಿಳಿಸಿದ್ದಾರೆ.















