ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹುಟ್ಟೂರು ಸಿದ್ದರಾಮನಹುಂಡಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಜಗಳ ತೀವ್ರ ಸ್ವರೂಪ ಪಡೆದುಕೊಂಡಿದೆ.
ಘಟನೆ ಬಗ್ಗೆ ವರುಣಾ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು ಸಿದ್ದರಾಮನಹುಂಡಿಯಲ್ಲಿ ಕಾರು-ಬೈಕ್ ಡಿಕ್ಕಿಯಿಂದ ಜಗಳ ನಡೆದಿದೆ. ಬಿಜೆಪಿ ಅವರು ಇದಕ್ಕೆ ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ. ಬಿಜೆಪಿ ಅವರು ಗಲಭೆ ಮಾಡಿಸಲು ನಿಸ್ಸಿಮರು ಎಂದು ಕಿಡಿಕಾರಿದರು.
ಬಿಜೆಪಿ ಹಸಿ ಸುಳ್ಳು ಹೇಳುತ್ತಾ ದ್ಚೇಷ ತಂದು ಹಾಕಿ ತಮ್ಮ ಬೇಳೆ ಬೇಯಿಸಿ ಕೊಳ್ಳುವ ತಂತ್ರ ಮಾಡುತ್ತಿದೆ. ಅವರು ಎಷ್ಟೇ ಪ್ರಚೋದನೆ ಮಾಡಿದರು ಕಾಂಗ್ರೆಸ್ ಕಾರ್ಯಕರ್ತರು ಪ್ರಚೋದನೆಗೆ ಒಳಗಾಗಬಾರದು. ಬಿಜೆಪಿ ರಾಜಕೀಯ ಲಾಭಕ್ಕಾಗಿ ಈ ರೀತಿ ಕಾರ್ಯತಂತ್ರ ಮಾಡುತ್ತಿದೆ ಎಂದು ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದರು.
ಸಿದ್ದರಾಮಯ್ಯ ಸಹೋದರರ ಮಕ್ಕಳ ವಿರುದ್ದ ಪ್ರಕರಣ ದಾಖಲಾಗಿರುವ ಬಗ್ಗೆ ಮಾತನಾಡಿ, ಗಲಾಟೆ ವೇಳೆ ಸಿದ್ದರಾಮಯ್ಯ ಕುಟುಂಬದವರು ಯಾರು ಅಲ್ಲಿ ಇರಲಿಲ್ಲ. ನಮ್ಮ ಸಂಬಂಧಿಕರ ಮನೆ ಮುಂದೆ ಘಟನೆ ಆಗಿದೆ ಅಷ್ಟೇ. ಆದರೂ ದುರುದ್ದೇಶದಿಂದ ನಮ್ಮ ಕುಟುಂಬದ ಸದಸ್ಯರ ಮೇಲೆ ದೂರು ನೀಡಿದ್ದಾರೆ ಎಂದರು.
ಘಟನೆ ಹಿನ್ನೆಲೆ
ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ಉಂಟಾಗಿ, ಬಿಜೆಪಿ ಪ್ರಚಾರ ರಥದ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಕಲ್ಲೆಸೆದ ಆರೋಪ ಮಾಡಲಾಗಿದೆ. ಸಿದ್ದರಾಮನಹುಂಡಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅಣ್ಣನ ಮನೆ ಮುಂದೆ ಪ್ರಚಾರ ಮಾಡುವಾಗ ಘಟನೆ ನಡೆದಿದ್ದು, ಈ ವೇಳೆ ಬಿಜೆಪಿ ಕಾರ್ಯಕರ್ತ ನಾಗೇಶ್ ಮೇಲೆ ಹಲ್ಲೆ ಆರೋಪ ಕೇಳಿಬಂದಿದೆ. ನಾಗೇಶ್ ಕಾಲಿಗೆ ಪೆಟ್ಟಾಗಿದ್ದು, ಈ ಬಗ್ಗೆ ಸಿದ್ದರಾಮಯ್ಯ ಅಣ್ಣನ ಮಕ್ಕಳ ವಿರುದ್ಧ ವರುಣಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.