ಕಲಬುರಗಿ: ರಾಷ್ಟ್ರೀಯ ಹೆದ್ದಾರಿ ಕಲಬುರಗಿ- ಜೇವರ್ಗಿ ನಡುವಿನ ಫರಹತಾಬಾದ್ ನ ಖಣಿ ಬಳಿ ನ.5ರ ಮಂಗಳವಾರ ರಾತ್ರಿ ಕಾರು ಹಾಗೂ ಪಿಕಪ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.
ಕಾರು ಹಾಗೂ ಪಿಕಪ್ ನಲ್ಲಿದ್ದ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಕಲಬುರಗಿ ನಗರದ ಜನತಾ ಲೇಔಟ್ ನ ನಿವಾಸಿ ಮುರುಗೇಶ ಚಂದ್ರಶೇಖರ ಉಪ್ಪಿನ (42) ಹಾಗೂ ಶಹಾಬಾದ್ ನ ನಿವಾಸಿ ಧೂಳಮ್ಮ ಯಮನಪ್ಪ ಪೂಜಾರಿ ( 60) ಮೃತಪಟ್ಟವರು.
ಇತರ 6-7 ಜನ ಗಾಯಗೊಂಡಿದ್ದಾರೆ. ಅಪಘಾತದ ಪರಿಣಾಮ ಕಾರು ನುಜ್ಜುಗುಜ್ಜಾಗಿದೆ.
ಮುರುಗೇಶ ಅವರು ಜೇವರ್ಗಿಯಿಂದ ಕಲಬುರಗಿ ಕಡೆಗೆ ಕಾರಿನಲ್ಲಿಬರುತ್ತಿದ್ದಾಗ ಹಾಗೂ ಹೊಲದಲ್ಲಿ ಹತ್ತಿ ಬಿಡಿಸಿ ವಾಪಸ್ ಪಿಕಪ್ ನಲ್ಲಿ ತೆರಳುತ್ತಿರುವಾಗ ಈ ಅಪಘಾತ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಕಲಬುರಗಿ ಸಂಚಾರಿ- 2 ವಿಭಾಗದ ಇನ್ಸ್ ಪೆಕ್ಟರ್ ಮಹಾಂತೇಶ ಪಾಟೀಲ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.