ಮೈಸೂರು(Mysuru): ಮಡಿವಾಳ ಸಮುದಾಯವು ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು, ಮಹಾನಗರ ಪಾಲಿಕೆ ಬಜೆಟ್‌ನಲ್ಲಿ ವೃತ್ತಿ ಪ್ರೋತ್ಸಾಹದಾಯಕ ಧನವನ್ನು ಘೋಷಣೆ ಮಾಡುವುದಾಗಿ ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶಿವಕುಮಾರ್ ತಿಳಿಸಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕರ್ನಾಟಕ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಡಿವಾಳ ಮಾಚಿದೇವರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಶೋಷಣೆ ಮೇಲು-ಕೀಳು ತಾರತಮ್ಯ ಮೂಢನಂಬಿಕೆ ವಿರುದ್ಧ, ಧೀನರು ಹಾಗೂ ತುಳಿತಕ್ಕೊಳಗಾದವರ ಪರ ಸಾಮಾಜಿಕ ನ್ಯಾಯ ಒದಗಿಸಲು ವಚನ ರೂಪದಲ್ಲಿ ಕೆಲಸ ಮಾಡಿದ ಮಡಿವಾಳ ಮಾಚಿದೇವರು, ನುಡಿದಂತೆ ನಡೆದ, ನಡೆದಂತೆ ನುಡಿದ ಶ್ರೇಷ್ಠ ಶರಣರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆಯ ಅಧ್ಯಕ್ಷ ರಘು ಕೌಟಿಲ್ಯ ಮಾತನಾಡಿ, ಎಲ್ಲಾ ಸಮುದಾಯದವರನ್ನು ಒಳಗೊಳ್ಳುವ ಮೂಲಕ ಮಾಚಿದೇವರ ಮಂಟಪ ಅನುಭವ ಮಂಟಪವಾಗಬೇಕು. ವಚನ ಸಾಹಿತ್ಯವನ್ನು ಸಂರಕ್ಷಿಸಿದ ಮಹಾಶರಣರಲ್ಲಿ ಒಬ್ಬರಾದ ಮಾಚಿದೇವರ ಜಯಂತಿ ಕೇವಲ ಸಮುದಾಯದವರೇ ಆಚರಿಸಬೇಕಂತಿಲ್ಲ. ಮಡಿ ಎಂದರೆ ಬಟ್ಟೆಯ ಮಡಿಯಲ್ಲ ಮನವನ್ನು ಮಡಿಯಾಗಿ ಇಟ್ಟುಕೊಂಡವನೇ ನಿಜವಾದ ಮಡಿವಾಳ. ಮಾಚಿದೇವರು ಶುದ್ಧತೆ ಕ್ರಾಂತಿ ಸ್ವಾಭಿಮಾನ ವೀರತ್ವದ ಸಂಕೇತ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಉಪ ಮಹಾಪೌರರಾದ ರೂಪ ಅವರು, ಮಡಿವಾಳ ಮಾಚಿದೇವರು ಶರಣ ಸಮುದಾಯದ ಅಗ್ರಶರಣರಲ್ಲಿ ಒಬ್ಬರು. 12ನೇ ಶತಮಾನದಲ್ಲಿ ವಚನದ ಮೂಲಕ ಸಮಾಜದ ಅಸಮಾನತೆಯನ್ನು ತೊಲಗಿಸುವಲ್ಲಿ ಕಲಿದೇವರ ‘ಕಲಿ’ ಎಂಬ ಅಂಕಿತನಾಮದೊಂದಿಗೆ ಹಲವಾರು ವಚನಗಳನ್ನು ಬರೆದಿದ್ದಾರೆ. ಬಿಜಾಪುರದಲ್ಲಿ ಜನಿಸಿದ ಇವರು ಬಸವಣ್ಣನವರನ್ನು ಗಡಿಪಾರು ಮಾಡಿದ ಸಂದರ್ಭದಲ್ಲಿ ಬಸವಣ್ಣನವರ ವಚನಗಳನ್ನು ಸಂರಕ್ಷಿಸಿದವರಲ್ಲಿ ಮೇಲ್ಪಂಕ್ತಿಯವರಾಗಿದ್ದರು ಎಂದು ತಿಳಿಸಿದರು.
ದೇವರ ಅನುಗ್ರಹ ಪಡೆದರೆ ಮಾತ್ರ ಮಾನವ ಜನ್ಮ ಸಾರ್ಥಕ ಇಲ್ಲದಿದ್ದರೆ ಕಾಗೆ ಕೋಳಿಗಿಂತಲೂ ಕಡೆಯಾಗುತ್ತೇವೆ ಎಂಬ ಸಂದೇಶವನ್ನು ವಚನದ ಮೂಲಕ ನೀಡಿದ್ದಾರೆ. ವಚನಗಳ ಅರ್ಥವನ್ನು ನಮ್ಮ ಆಚರಣೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಎಂ ಶಿವಕುಮಾರ್, ಉಪ ವಿಭಾಗಾಧಿಕಾರಿಗಳಾದ ಕಮಲಾ, ಮಡಿವಾಳ ಮಾಚಿದೇವರ ಸಂಘದ ಜಿಲ್ಲಾಧ್ಯಕ್ಷರಾದ ಎಂ ರಾಜು, ಮಡಿವಾಳ ಮಾಚಿ ದೇವರ ಸಂಘದ ಪದಾಧಿಕಾರಿಗಳು, ವಿವಿಧ ಸಮುದಾಯದ ಮುಖಂಡರುಗಳು ಉಪಸ್ಥಿತಿಯಲ್ಲಿದ್ದರು.