ಬೆಂಗಳೂರು: ಪಾನಮತ್ತ ವಾಹನ ಚಾಲನೆ ಹಾಗೂ ವ್ಹೀಲಿಂಗ್ ಮಾಡುವವರ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸುತ್ತಿರುವ ನಗರದ ಪೂರ್ವ ವಿಭಾಗದ ಸಂಚಾರ ಪೊಲೀಸರು ನಿಯಮ ಉಲ್ಲಂಘಿಸಿದ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ.
ಪಾನಮತ್ತ ಚಾಲನೆ ಹಾಗೂ ಅಪಾಯಕಾರಿ ವ್ಹೀಲಿಂಗ್ ಮಾಡುವವರ ವಿರುದ್ಧ ಸಮರ ಸಾರಿರುವ ಪೂರ್ವ ವಿಭಾಗದ ಸಂಚಾರ ಪೊಲೀಸರು, ಡಿಸೆಂಬರ್ 1ರಿಂದ 26ರ ವರೆಗೆ ಕಾರ್ಯಾಚರಣೆ ನಡೆಸಿ ವ್ಹೀಲಿಂಗ್ ಮಾಡುತ್ತಿದ್ದ 29 ದ್ವಿಚಕ್ರ ವಾಹನ ಜಪ್ತಿ ಮಾಡಿ ಅವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಹಾಗೆಯೇ, ಸುಮಾರು 3,60,214 ವಾಹನಗಳನ್ನು ತಪಾಸಣೆ ನಡೆಸಿ 5,500 ಚಾಲಕ/ಸವಾರರ ವಿರುದ್ಧ ಮದ್ಯಪಾನ ಸೇವನೆದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಿಯಮ ಉಲ್ಲಂಘಿಸಿದವರ ವಾಹನ ಪರವಾನಗಿ (ಡಿಎಲ್) ರದ್ದುಗೊಳಿಸುವಂತೆ ಸಂಬಂಧಪಟ್ಟ ಆರ್ಟಿಓ ಕಚೇರಿಗಳಿಗೆ ಶಿಫಾರಸು ಮಾಡಲಾಗಿದೆ. ಪೂರ್ವ ವಿಭಾಗದ ಶಿವಾಜಿನಗರ, ಪುಲಕೇಶಿನಗರ, ಬಾಣಸವಾಡಿ, ಹಲಸೂರು, ಜೀವನ್ ಭೀಮಾನಗರ ವ್ಯಾಪ್ತಿಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿರುವುದಾಗಿ ಸಂಚಾರ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














