ನವದೆಹಲಿ: ಹಿಂದುಳಿದ ವರ್ಗಗಳ ಮೀಸಲಾತಿ ಹೆಚ್ಚಿಸಿ, ವರ್ಗೀಕರಣವನ್ನು ಪರಿಷ್ಕರಿಸುವಂತೆ ಜಯಪ್ರಕಾಶ್ ಹೆಗ್ಡೆ ನೇತೃತ್ವದ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಜಾತಿವಾರು ಜನಗಣತಿ ವರದಿಯಲ್ಲಿ ಒಬಿಸಿ ಮೀಸಲಾತಿಯನ್ನು ಶೇ 32 ರಿಂದ ಶೇ 51 ಕ್ಕೆ ಹೆಚ್ಚಿಸುವಂತೆ ಶಿಫಾರಸು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದಲ್ಲದೇ ಪ್ರವರ್ಗ 1 ಬದಲಿಗೆ ಪ್ರವರ್ಗ A ಹಾಗೂ ಪ್ರವರ್ಗ B ರಚನೆಗೂ ಸಲಹೆ ನೀಡಿದೆ ಎನ್ನಲಾಗಿದೆ.
ಪ್ರವರ್ಗ 1Aಗೆ ಶೇ 6, 1Bಗೆ ಶೇ 12, 2Aಗೆ ಶೇ 10, 2Bಗೆ ಶೇ 8, 3Aಗೆ ಶೇ 7, 3Bಗೆ ಶೇ 8ರಷ್ಟು ಮೀಸಲಾತಿ ನೀಡಬೇಕು. ಪ್ರವರ್ಗ 1ಕ್ಕೆ ಶೇ 4, 2Aಗೆ ಶೇ 15, 2Bಗೆ ಶೇ 4, 3Aಗೆ ಶೇ 4, 3Bಗೆ ಶೇ 5, ಎಸ್‌ಸಿಗೆ ಶೇ 17.15, ಎಸ್‌ಟಿಗೆ ಶೇ 6.95ರಷ್ಟು ಮೀಸಲಾತಿ ನೀಡುವಂತೆಯೂ ಶಿಫಾರಸು ಮಾಡಿದೆ ಎಂದು ತಿಳಿದು ಬಂದಿದೆ.
ಇನ್ನು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ( EWS) ಶೇ 10ರಷ್ಟು ಮೀಸಲಾತಿ ನೀಡಲಾಗಿದೆ. ಈ ಎಲ್ಲಾ ಮೀಸಲಾತಿಯನ್ನು ಒಟ್ಟುಗೂಡಿಸಿದರೆ ಶೇ 66ರಷ್ಟಾಗಲಿದೆ. ಪ್ರವರ್ಗ ಒಂದರಲ್ಲಿದ್ದ ಕೆಲ ಜಾತಿಗಳನ್ನು 1Aಗೆ ವರ್ಗೀಕರಿಸಲು ಶಿಫಾರಸು ಮಾಡಲಾಗಿದೆ. ಮತ್ತೆ ಕೆಲವು ಜಾತಿಗಳನ್ನು ವೃತ್ತಿ ಆಧಾರದ ಮೇಲೆ 1 A ಗೆ ಸೇರಿಸಿ ವರ್ಗೀಕರಿಸಲು ಶಿಫಾರಸು ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.
ಜಾತಿಗಣತಿಗೆ ಒಕ್ಕಲಿಗರ ಸಂಘದಿಂದ ವಿರೋಧ
ಜಾತಿಗಣತಿ ಹಾಗೂ ಮೀಸಲಾತಿ ಬದಲಾವಣೆಗೆ ಆಯೋಗ ಮಾಡಿರುವ ಶಿಫಾರಸಿಗೆ ಒಕ್ಕಲಿಗರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ. ಮೊದಲಿನಿಂದಲೂ ಜಾತಿ ಗಣತಿಯನ್ನು ನಾವು ವಿರೋಧಿಸಿದ್ದೇವೆ. ವರದಿ ಜಾರಿ ಮಾಡುವುದಾರೆ ಸಂಪೂರ್ಣ ಸಮೀಕ್ಷೆ ಮಾಡಿ ಅನುಷ್ಠಾನ ಮಾಡಬೇಕು ಎಂದು ಒಕ್ಕಲಿಗರ ಸಂಘದ ಕೆಂಚೇಗೌಡ ಆಗ್ರಹಿಸಿದ್ದಾರೆ.














