ಮೈಸೂರು : ಜಾತಿ ನಿಗಮಗಳಿಂದ ಸಣ್ಣ ಸಣ್ಣ ಸಮುದಾಯಗಳಿಗೆ ಯಾವುದೇ ಪ್ರಯೋಜವಿಲ್ಲ, ಅಧ್ಯಕ್ಷರಾದವರಿಗೆ ಮಾತ್ರ ಕಾರು ಕಚೇರಿ ಸಿಕ್ಕಿ ಒಂದಷ್ಟು ಅನುಕೂಲ ಆಗಬಹುದು. ಮಡಿವಾಳ ಸಮುದಾಯ ಸಂಘಟಿತರಾಗಿ ತಮ್ಮ ಶಕ್ತಿ ಪ್ರದರ್ಶನ ಮಾಡುವ ಮೂಲಕ ಅವಕಾಶಗಳನ್ನು ಗಿಟ್ಟಿಸಿಕೊಳ್ಳಬೇಕಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷರಾದ ರಘು ಕೌಟಿಲ್ಯ ಹೇಳಿದರು.
ನಗರದ ನಜರ್‌ಬಾದ್‌ನಲ್ಲಿರುವ ಸರ್ಕಾರಿ ಅತಿಥಿ ಗೃಹದಲ್ಲಿ ಶನಿವಾರ ನಡೆದ ಮೈಸೂರು ಜಿಲ್ಲಾ ವೀರ ಮಡಿವಾಳರ ಸಂಘದ ಪ್ರಥಮ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಸನ್ಮಾನಿತರಾಗಿ ಸಂಘಟನೆಗೆ ಶುಭಾಶಯ ಕೋರಿ ಅವರು ಮಾತನಾಡಿದರು.
ಮಡಿವಾಳ ಸಮುದಾಯದವರು ಮೊದಲು ತಮ್ಮಲ್ಲಿರುವ ಕೀಳರಿಮೆಯನ್ನು ತೊರೆಯಬೇಕು. ಕಂಡ ಕಂಡವರಿಗೆ ಜೈಕಾರ ಹಾಕುವುದನ್ನು, ಕಾಲಿಗೆ ಬೀಳುವುದನ್ನು ನಿಲ್ಲಿಸಿ, ರಾಜಕಾರಣದಲ್ಲಿ ಹಣಬಲ, ಜಾತಿಬಲ, ತೋಳ್ಬಲ ಇದ್ದವರಿಗೆ ಮಾತ್ರ ಅವಕಾಶಗಳು ಸಿಗುತ್ತವೆ. ನಮ್ಮ ಸಮುದಾಯದವರು ದೇವಸ್ಥಾನ ಕಟ್ಟಿಸಿಕೊಡಿ, ಕಾಂಪೌಂಡ್ ಹಾಕಿಸಿಕೊಡಿ ಎಂದು ರಾಜಕಾರಣಿಗಳ ಮುಂದೆ ಕೈ ಕಟ್ಟಿ ನಿಲ್ಲುವುದು ಬೇಡ, ರಾಜಕೀಯ ಅವಕಾಶಗಳಿಗಾಗಿ ಮುನ್ನುಗ್ಗಿ, ನಮ್ಮ ಸಮುದಾಯಕ್ಕೆ ಎಲ್ಲ ರೀತಿಯಲ್ಲೂ ಶಕ್ತಿ ಇದೆ. ನಾವು ಒಗ್ಗಟ್ಟಾಗಿ ಅದನ್ನು ಪ್ರದರ್ಶನ ಮಾಡಬೇಕು ಇದರಿಂದ ಮಾತ್ರ ಎಲ್ಲ ರೀತಿಯ ಸೌಲಭ್ಯ ಪಡೆಯಲು ಸಾಧ್ಯ ಎಂದರು. ಮಡಿವಾಳ ಅಭಿವೃದ್ಧಿ ನಿಗಮದಲ್ಲಿ ಹಣವೇ ಇಲ್ಲ, ಇನ್ನು ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ. ಈ ಹಿಂದೆ ದೇವರಾಜ ಅರಸು ಅಭಿವೃದ್ಧಿ ನಿಗಮದಲ್ಲಿಯೇ ನಮ್ಮ ಸಮುದಾಯ ಇದ್ದಾಗ ಒಂದಷ್ಟು ಅನುಕೂಲ ಆಗಿತ್ತು, ಈ ರಾಜ್ಯಕ್ಕೆ ೫ ಕೋಟಿ ಕೊಟ್ಟರೆ ಏನು ಪ್ರಯೋಜನ, ಒಂದು ತಾಲ್ಲೂಕಿಗೆ ಒಂದಿಬ್ಬರಿಗೆ ಸಹಾಯ ಸಿಗಬಹುದು. ಉಳಿದವರ ಕತೆ ಏನು ಎಂದು ಪ್ರಶ್ನಿಸಿದರು.
ಮೈಸೂರು ಜಿಲ್ಲಾ ವೀರ ಮಡಿವಾಳ ಸಂಘಟನೆ ಅಸ್ತಿತ್ವಕ್ಕೆ ಬಂದಿರುವುದು ಸಂತೋಷದ ವಿಷಯ, ಆದರೇ ಸಂಘಟನೆಗೆ ರಾಜಕಾರಣ ಬೆರೆಸುವುದು ಬೇಡ, ರಾಜಕಾರಣ ಏನಿದ್ದರೂ ನೀವು ವೈಯುಕ್ತಿಕವಾಗಿ ಮಾಡಿ, ರಾಜಕಾರಣದಿಂದ ಸಂಘಟನೆಗೆ, ಸಮುದಾಯಕ್ಕೆ ಅನುಕೂಲ ಪಡೆದುಕೊಳ್ಳಿ, ಚುನಾವಣೆ ಬಂದಾಗ ಮಾತ್ರ ನಾವು ರಾಜಕಾರಣ ಮಾಡೋಣ ಎಂದು ನೂತನ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಯಾವುದೇ ವೈಯುಕ್ತಿಕ ಹಿತಾಸಕ್ತಿಗಾಗಿ ಸಂಘಟನೆ ಹೆಸರು ಬಳಕೆ ಮಾಡಿಕೊಳ್ಳುವುದು ಬೇಡ, ಆದಷ್ಟು ಬೇಗ ತಾಲ್ಲೂಕು ಮಟ್ಟದಲ್ಲಿ ಸಭೆಗಳನ್ನು ಕರೆದು ಎಲ್ಲರನ್ನೂ ಒಗ್ಗೂಡಿಸಿ ಸದಸ್ಯತ್ವಗಳನ್ನು ನೋಂದಣಿ ಮಾಡಿಸಿ. ಸಂಘದ ಮತ್ತು ಸಮುದಾಯದ ಅಭಿವೃದ್ಧಿಗೆ ನಾವು ಯಾವುದೇ ರೀತಿಯಲ್ಲೂ ಸಹಾಯ ಮಾಡಲು ಬದ್ಧನಾಗಿರುತ್ತೇನೆ ಎಂದು ಭರವಸೆ ನೀಡಿದರು. ಮೈಸೂರು ಜಿಲ್ಲಾ ವೀರ ಮಡಿವಾಳರ ಸಂಘದ ನೂತನ ಅಧ್ಯಕ್ಷರಾದ ಸತ್ಯನಾರಾಯಣ ಮಾತನಾಡಿ, ಮಡಿವಾಳ ಸಮುದಾಯದವರು ಕಾಯಕಯೋಗಿಗಳು, ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲಸೌಲಭ್ಯ ದೊರಕುತ್ತಿಲ್ಲ, ಇದರಿಂದ ಸಮುದಾಯದ ಅಭಿವೃದ್ಧಿಗೆ ಹಿನ್ನಡೆ ಆಗಿದೆ. ಈ ಕಾರಣಕ್ಕಾಗಿ ಮೈಸೂರು ಜಿಲ್ಲಾ ವೀರ ಮಡಿವಾಳ ಸಹಕಾರ ಬ್ಯಾಂಕ್ ಸ್ಥಾಪನೆ ಮಾಡಲು ನಾವು ಮುಂದಾಗಿದ್ದೇವೆ. ಇದರಿಂದ ಸಮುದಾಯ ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಿದೆ. ಇದಕ್ಕೆ ಜನ ಪ್ರತಿನಿಧಿಗಳು, ಸಚಿವರು, ಮುಖ್ಯಮಂತ್ರಿಗಳು ನಿಗದಿತ ಅನುದಾನ ನೀಡಿ ಅನುಕೂಲ ಮಾಡಿಕೊಡಬೇಕು. ಮಡಿವಾಳ ಸಮುದಾದ ಮಕ್ಕಳ ಶಿಕ್ಷಣಕ್ಕಾಗಿ ಹಾಸ್ಟೆಲ್ ಅಗತ್ಯವಿದೆ. ಚಾಮರಾಜ ಕ್ಷೇತ್ರದಲ್ಲಿ ಸಮುದಾಯ ಭವನವೂ ಬೇಕಿದೆ. ಇದನ್ನು ಶಾಸಕರಾದ ಹರೀಶ್‌ಗೌಡ ಅವರ ಗಮನಕ್ಕೆ ತರಲಾಗುವುದು ಎಂದರು.
ಸಂಘದ ಗೌರವಾಧ್ಯಕ್ಷರಾದ ಬಿ.ಜೆ.ಕೇಶವ ಮಾತನಾಡಿ, ವೀರ ಮಡಿವಾಳ ಜಿಲ್ಲಾ ಸಂಘದ ಪ್ರಥಮ ಸಾಮಾನ್ಯ ಸಭೆ ಯಶಸ್ವಿಯಾಗಿ ನಡೆದಿದೆ. ಜನಗಣತಿ ಸಂದರ್ಭದಲ್ಲಿ ಮಡಿವಾಳರು, ಮಡಿವಾಳ ಶೆಟ್ಟಿ,ಧೋಬಿ, ಅಗಸ ಎಂದು ನಮೂದಿಬೇಡಿ, ಕೇವಲ ಮಡಿವಾಳ ಎಂದು ಮಾತ್ರ ಬರೆಸಬೇಕು ಎಂದು ಸಲಹೆ ನೀಡಿದರು. ಅಲ್ಲದೇ ನಗರದ ೬೫ ವಾರ್ಡ್‌ಗಳಲ್ಲಿ ಯಾವುದಾದರೊಂದು ರಸ್ತೆಗೆ ಮಾಚಿದೇವರ ರಸ್ತೆ ಎಂದು ನಾಮಕರಣ ಮಾಡಬೇಕು. ಈ ಬಗ್ಗೆ ಪಾಲಿಕೆ ಆಯುಕ್ತರಿಗೆ, ಎಲ್ಲ ಶಾಸಕರಿಗೆ, ಸಂಸದರಿಗೆ ಮತ್ತು ಸರ್ಕಾರಕ್ಕೆಮನವಿ ಮಾಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳನ್ನು ಗೌರವಿಸಲಾಯಿತು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಕುರುಬೂರು ಮಹದೇವಸ್ವಾಮಿ, ರವಿ, ಎಸ್.ಜಿ.ಹರ್ಷವರ್ಧನ, ಕೆ.ಹೆಚ್.ಕೃಷ್ಣಯ್ಯ, ಸಿ.ಎಸ್.ಮಹೇಶ, ಪ್ರಧಾನ ಕಾರ್ಯದರ್ಶಿ ಕೆಂಪಶೆಟ್ಟಿ, ಖಜಾಂಚಿ ರವಿಚಂದ್ರ, ಸಂಚಾಲಕರಾದ ಕೆಂಬಾಲ್ ಶ್ರೀರಾಮ್, ಚಿಕ್ಕಹೊನ್ನಶೆಟ್ಟಿ, ಬಿ.ಬಸವರಾಜು, ಸಂಘಟನಾ ಕಾರ್ಯದರ್ಶಿ ಮಂಜು, ನಾಗರಾಜು, ಸಹ ಕಾರ್ಯದರ್ಶಿ ವೆಂಟಕೇಶ್ ಟಿ., ಕಾನೂನು ಸಲಹೆಗಾರರಾದ ಕುಮಾರ್ ಎಸ್.ಎಲ್., ಮಹಿಳಾ ಅಧ್ಯಕ್ಷರಾದ ಕೆ.ಎಂ.ವಸಂತಕುಮಾರಿ, ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮಿ, ಗೌರವ ಸಲಹೆಗಾರರಾದ ಕಾಂತರಾಜು, ನಿರ್ದೇಶಕರಾದ ಪಿ.ಗಿರೀಶ್, ರಾಚಣ್ಣ, ವೆಂಕಟೇಶ್, ಮಹೇಶ್ ವಿ.,ಶ್ರೀನಿವಾಸ್, ರಮೇಶ್, ವಿಶ್ವನಾಥ್ ಎಂ., ರಾಜಣ್ಣ ಡಿ.ಟಿ., ಇತರೆ ಪದಾಧಿಕಾರಿಗಳಾದ ಕೆ.ರಾಘು, ಗಣೇಶ್, ಪ್ರವೀಣ್ ಕುಮಾರ್. ಪ್ರಶಾಂತ, ರಾಘವೇಂದ್ರ, ಶ್ರೀನಿವಾಸ, ಮಹಾದೇವ ಶೆಟ್ಟಿ, ರಂಗಸ್ವಾಮಿ, ರಮೇಶ್, ಗುರುಮೂರ್ತಿ, ವಿನೋದ್ ಇದ್ದರು.















