ಬೆಂಗಳೂರು:ಕರ್ನಾಟಕ ಎದುರಿಸುತ್ತಿರುವ ಕಾವೇರಿ ಜಲ ಸಂಕಷ್ಟವನ್ನು ಪರಿಹಾರ ಮಾಡುವ ಶಕ್ತಿ ಇರುವುದು ಪ್ರಧಾನಿ ಮೋದಿ ಅವರಿಗೆ ಮಾತ್ರ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ಜೆ.ಪಿ. ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಈ ಚುನಾವಣೆ ಮುಗಿದ ನಂತರ ಮತ್ತೆ ಪ್ರಧಾನಿ ಆಗಲಿರುವ ಮೋದಿ ರಾಜ್ಯದ ಜಲ ಸಂಕಷ್ಟಕ್ಕೆ ಪರಿಹಾರ ನೀಡಲಿದ್ದಾರೆ ಎನ್ನುವ ವಿಶ್ವಾಸ ನನಗಿದೆ ಎಂದು ತಿಳಿಸಿದರು.
ಪ್ರತಿ ವರ್ಷ ತಮಿಳುನಾಡು ರಾಜ್ಯದವರು ಕಾವೇರಿ ಜಲ ನಿರ್ವಹಣಾ ಸಮಿತಿ ಹಾಗೂ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ಮುಂದೆ ಕರ್ನಾಟಕದಿಂದ ನೀರು ಕೊಡಿಸಿ ಎಂದು ಅರ್ಜಿ ಹಾಕುತ್ತಾರೆ. ನಮ್ಮ ಬಳಿ ನೀರು ಇಲ್ಲದೆ ಇದ್ದರೂ ನೀರು ಬಿಡಿ ಎನ್ನುತ್ತಾರೆ. ನಮ್ಮ ಅಧಿಕಾರಿಗಳು ಏನೇ ವಾದ ಮಾಡಿದರೂ ಪ್ರಯೋಜನ ಆಗಿಲ್ಲ. ಕಾವೇರಿ ಪ್ರಾಧಿಕಾರದವರು ಯಾವತ್ತು ಕೂಡ ನಮ್ಮ ರಾಜ್ಯಕ್ಕೆ ಬಂದು ನೀರು ಎಷ್ಟು ಇದೆ ಎಂದು ನೋಡಿಲ್ಲ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.
ರಾಜಕೀಯ ಬಿಟ್ಟು ಹೋರಾಡಬೇಕು
ಕಾವೇರಿ ಸಮಸ್ಯೆಗೆ ಪರಿಹಾರ ಇದೆ. ಪ್ರಧಾನಿ ಮೋದಿ ಅವರಿಗೆ ನಮಗೆ ಆಗಿರುವ ಅನ್ಯಾಯ ಮನ ಮುಟ್ಟುವಂತೆ ನಾವು ಒಟ್ಟಾಗಿ ಹೋರಾಡಬೇಕು. ಇದರಲ್ಲಿ ರಾಜಕೀಯ ಇರಬಾರದು. ರಾಜಕೀಯ ಪಕ್ಷಗಳು ಒಟ್ಟಾಗಿ ಹೋರಾಟ ಮಾಡಬೇಕು. ನಾನು ಇನ್ನೂ ಎರಡೂವರೆ ವರ್ಷ ರಾಜ್ಯಸಭೆಯಲ್ಲಿ ಇರುತ್ತೇನೆ. ಹೊರಾಡುತ್ತೇನೆ, ನಾನು ಸಾಯುವವರೆಗೂ ಕಾವೇರಿ ಬಗ್ಗೆ ಹೋರಾಟ ಮಾಡುತ್ತೇನೆ. ರಾಜ್ಯದ ಜನರಿಗೆ ನ್ಯಾಯ ಸಿಗುವವರೆಗೂ ವಿರಮಿಸುವುದಿಲ್ಲ. ನನ್ನ ಕೊನೆಯುಸಿರು ಇರುವವರೆಗೂ ಹೋರಾಟ ಮಾಡುತ್ತೇನೆ ಎಂದು ಗದ್ಗದಿತರಾದರು.
ಕಾವೇರಿ ವಿಚಾರವನ್ನು ನಾನು ಸಂಸತ್‌ನಲ್ಲಿ ಪ್ರಸ್ತಾಪ ಮಾಡುತ್ತೇನೆ. ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಬೇಕು ಎಂದು ಮೋದಿ ಅವರಿಗೆ ಮನವಿ ಮಾಡಿದ್ದೇನೆ ಎಂದರು.
ಸ್ಥಾಯಿ ಸಮಿತಿ ಮಾಹಿತಿ ಕೊಟ್ಟಿದ್ದೇನೆ
ಕೇಂದ್ರ ಜಲಶಕ್ತಿ ಸಚಿವಾಲಯದ ಜಲಸಂಪನ್ಮೂಲ ಸ್ಥಾಯಿ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದೆ. ಈ ಸಭೆಯಲ್ಲಿ ಕೊಡಗು ಸೇರಿ ಕಾವೇರಿ ಜಲಾಶಯದ ಹತ್ತು ಜಿಲ್ಲೆಗಳಲ್ಲಿ ರೈತರಿಗೆ ಉಂಟಾಗಿರುವ ಅನ್ಯಾಯದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ನಮ್ಮ ರಾಜ್ಯಕ್ಕೆ 8 ಸಾವಿರ ಕೋಟಿ ರೂ. ಕೃಷ್ಣ ಜಲಾನಯನ ಪ್ರದೇಶದ ಯೋಜನೆಗಳಿಗೆ ಕೇಂದ್ರದಿಂದ ಬಂದಿತ್ತು. ಆದರೆ ಕಾವೇರಿ ಜಲಾನಯನ ಯೋಜನೆಗೆ ಯಾವುದೇ ಹಣ ಬಂದಿಲ್ಲ. ಈ ಬಗ್ಗೆ ಸಮಿತಿ ಕೇಂದ್ರದ ಗಮನಕ್ಕೆ ತರಬೇಕು. ಇದರ ಬಗ್ಗೆ ನಾನು ಅವರ ಗಮನಕ್ಕೆ ತಂದಿದ್ದೇವೆ ಎಂದು ದೇವೇಗೌಡರು ವಿವರ ನೀಡಿದರು.
ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ, ಮಾಜಿ ಸಂಸದ ಕುಪೇಂದ್ರ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಕೆ.ಎನ್. ತಿಪ್ಪೇಸ್ವಾಮಿ, ಟಿ.ಎ.ಶರವಣ, ಮಾಜಿ ಸದಸ್ಯರಾದ ಚೌಡರೆಡ್ಡಿ ತೂಪಲ್ಲಿ ಹಾಜರಿದ್ದರು.