ನವದೆಹಲಿ: ಕಾವೇರಿ ನದಿ ನೀರು ನಿಯಂತ್ರಣ ಸಮಿತಿಯ ಸಭೆ (ಸಿಡಬ್ಲ್ಯುಆರ್ ಸಿ) ಮಂಗಳವಾರ ನಡೆಯಲಿದೆ.
ಕಾವೇರಿ ನದಿಯಿಂದ ತಮಿಳುನಾಡಿಗೆ ಪ್ರತಿನಿತ್ಯ ಅಂದಾಜು ಅರ್ಧ ಟಿಎಂಸಿ ಅಡಿ (5 ಸಾವಿರ ಕ್ಯೂಸೆಕ್) ನೀರು ಬಿಡುಗಡೆ ಮಾಡುವಂತೆ ಸಮಿತಿಯು ಆಗಸ್ಟ್ 29ರಂದು ಶಿಫಾರಸು ಮಾಡಿತ್ತು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಆಗಸ್ಟ್ 29ರಂದು ನಡೆಸಿದ ಸಭೆಯಲ್ಲಿ ಸೆಪ್ಟೆಂಬರ್ 12ರವರೆಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿತ್ತು. ಪ್ರಾಧಿಕಾರವು ನಿಗದಿಪಡಿಸಿದಷ್ಟು ನೀರನ್ನು ಕರ್ನಾಟಕ, ತಮಿಳುನಾಡಿಗೆ ಬಿಡುಗಡೆ ಮಾಡಿದೆ.
ಕಾವೇರಿ ಹಾಗೂ ಕೃಷ್ಣಾ ಕಣಿವೆಯಲ್ಲಿ ಭೀಕರ ಬರದ ಸನ್ನಿವೇಶ ಕಾಣಿಸಿಕೊಂಡಿದ್ದು, ಸೆಪ್ಟೆಂಬರ್ 12ರ ನಂತರ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್ ಗೆ ಈಗಾಗಲೇ ಪ್ರಮಾಣಪತ್ರ ಸಲ್ಲಿಸಿದೆ.
ಸಮಿತಿಯ ಅಧ್ಯಕ್ಷ ವಿನೀತ್ ಗುಪ್ತ ಅಧ್ಯಕ್ಷತೆಯಲ್ಲಿ ವರ್ಚುವಲ್ ಮೂಲಕ ಮಧ್ಯಾಹ್ನ 2.30ಕ್ಕೆ ಸಭೆ ನಡೆಯಲಿದ್ದು, ಕಾವೇರಿ ಕಣಿವೆಯ ಜಲಾಶಯಗಳ ಸ್ಥಿತಿ, ನೀರು ಬಿಡುಗಡೆ ಪ್ರಮಾಣ ಮತ್ತಿತರ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಜಲಾಶಯಗಳ ವಾಸ್ತವ ಸ್ಥಿತಿ ಕುರಿತು ಸಮಿತಿಯು ಪ್ರಾಧಿಕಾರಕ್ಕೆ ವರದಿ ನೀಡಲಿದೆ. ಇನ್ನಷ್ಟು ನೀರು ಬಿಡುಗಡೆಗೆ ಶಿಫಾರಸು ಮಾಡುವ ಸಾಧ್ಯತೆಯೂ ಇದೆ ಎಂದು ಮೂಲಗಳು ಹೇಳಿವೆ.