ನವದೆಹಲಿ: ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸೆಪ್ಟೆಂಬರ್ 21ಕ್ಕೆ ಮುಂದೂಡಿದೆ.
ಕರ್ನಾಟಕ ಕಾವೇರಿ ನೀರನ್ನು ಸಮರ್ಪಕವಾಗಿ ಹರಿಸುತ್ತಿಲ್ಲ ಎಂದು ಆರೋಪಿಸಿ ಸುಪ್ರಿಂಕೋರ್ಟ್ ಮೆಟ್ಟಿಲೇರಿರುವ ತಮಿಳುನಾಡು ಸರ್ಕಾರ, ಹೆಚ್ಚು ನೀರು ಬಿಡುವುದಕ್ಕೆ ಕರ್ನಾಟಕಕ್ಕೆ ಸೂಚಿಸುವಂತೆ ಅರ್ಜಿ ಸಲ್ಲಿಸಿತ್ತು. ಆ ಇಂದು (ಸೆಪ್ಟೆಂಬರ್ 06) ಕೈಗೆತ್ತಿಕೊಂಡ ನ್ಯಾಯಮೂರ್ತಿ ಬಿ.ಆರ್.ಗವಾಯಿ, ಒಬ್ಬರು ನ್ಯಾಯಮೂರ್ತಿ ರಜೆಯಲ್ಲಿದ್ದಾರೆ. ನಾನು ಮುಂದಿನ ವಾರ ವಿಚಾರಣೆಗೆ ಲಭ್ಯವಿಲ್ಲ. ಹೀಗಾಗಿ ಸಿಜೆಐ ಪೀಠದ ಮುಂದೆ ಹೋಗಿ ಹೊಸ ಪೀಠಕ್ಕೆ ಮನವಿ ಮಾಡಿ ಎಂದು ತಮಿಳುನಾಡು ಪರ ವಕೀಲ ಮುಕುಲ್ ರೋಹಟಗಿಗೆ ಸೂಚಿಸಿದರು.
ನಿಮ್ಮದೇ ಪೀಠದಲ್ಲಿ ವಿಚಾರಣೆ ಮುಂದುವರಿಸಿ ಎಂದು ಮುಕುಲ್ ರೋಹಟಗಿ ಮನವಿ ಮಾಡಿದರು. ಬಳಿಕ ವಕೀಲರ ಮನವಿಗೆ ಸ್ಪಂದಿಸಿದ ನ್ಯಾ.ಬಿ.ಆರ್.ಗವಾಯಿ ಸೆ.21ರಂದು ವಿಚಾರಣೆ ನಡೆಸಲು ಸಮ್ಮತಿಸಿದರು. ಅಲ್ಲದೇ ಅಂದೆ ಕರ್ನಾಟಕ ರೈತ ಸಂಘ ಸಲ್ಲಿಸಿದ್ದ ಅರ್ಜಿಯನ್ನೂ ಸಹ ವಿಚಾರಣೆ ಮಾಡುವುದಾಗಿ ಹೇಳಿದ್ದಾರೆ.
ಕಳೆದ ವಾರ ಕಾವೇರಿ ನೀರು ನಿರ್ವಹಣ ಪ್ರಾಧಿಕಾರವೂ, ಕರ್ನಾಟಕ ಪ್ರತಿದಿನ ಮುಂದಿನ ಹದಿನೈದು ದಿನಗಳಿಗೆ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶಿಸಿತ್ತು. CWMA ಆದೇಶಕ್ಕೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿತ್ತು. 5 ಸಾವಿರ ಕ್ಯೂಸೆಕ್ ನೀರು ಸಾಲುವುದಿಲ್ಲ. 24 ಸಾವಿರ ಕ್ಯೂಸೆಕ್ ನೀರು ಬೇಕು ಎಂದು ಒತ್ತಡ ಹೇರಿದ್ರು. ಆದ್ರೆ, ಇದಕ್ಕೆ CWMA ಒಪ್ಪಿರಲಿಲ್ಲ. ಇದೀಗ ಸುಪ್ರಿಂಕೋರ್ಟ್ ಮೆಟ್ಟಿಲೇರಿರುವ ತಮಿಳುನಾಡು ಸರ್ಕಾರ, ಹೆಚ್ಚು ನೀರು ಬಿಡುವುದಕ್ಕೆ ಸೂಚಿಸುವಂತೆ ಮನವಿ ಮಾಡಿದೆ.
ಕಾವೇರಿ ನೀರಿಗಾಗಿ ಎರಡು ರಾಜ್ಯ ಸರ್ಕಾರಗಳು ಕಾನೂನು ಹೋರಾಟ ನಡೆಸುತ್ತಿರುವ ಮಧ್ಯೆ ಕರ್ನಾಟಕದ ರೈತ ಸಂಘಟನೆಗಳು ಸುಪ್ರೀಂಕೋರ್ಟ್ ಮೊರೆ ಹೋಗಿವೆ. ಕಾವೇರಿ ನೀರಿಗಾಗಿ ರೈತ ಸಂಘಟನೆಗಳು ಕೂಡ ಸುಪ್ರೀಂಗೆ ಅರ್ಜಿ ಸಲ್ಲಿಸಿವೆ. ನಾವು ಬೆಳೆಗೆ ನೀರು ಕೇಳುತ್ತಿಲ್ಲ, ಕುಡಿಯಲು ಕೇಳುತ್ತಿದ್ದೇವೆ ಎಂದು ಮನವಿ ಮಾಡಿವೆ.