ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವ ಹಿನ್ನೆಲೆ ಮಂಡ್ಯದಲ್ಲಿ ರೈತರ ಪ್ರತಿಭಟನೆ ಮುಂದುವರೆದಿದ್ದು, ರೈತ ಹಿತ ರಕ್ಷಣಾ ಸಮಿತಿಯ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಪ್ರತಿಭಟನಾ ಧರಣಿ ನಡೆಯುತ್ತಿದ್ದು, ಕಾವೇರಿ ನದಿ ನಿರ್ವಾಹಣಾ ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬಾಯಿ ಬಡಿದು ಕೊಂಡು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ರೈತರಿಗೆ ಅನ್ಯಾಯ’, ‘ಅಯ್ಯಯ್ಯೋ ಹೋಯ್ತಲ್ಲಪ್ಪ ನೀರು’ ಎಂದು ಬಾಯಿ ಬಡಿದುಕೊಂಡು ರೈತರು ಪ್ರತಿಭಟಿಸಿದ್ದಾರೆ.
ಮಾಜಿ ಪರಿಷತ್ತ್ ಸದಸ್ಯ ಕೆಟಿ ಶ್ರೀಕಂಠೇಗೌಡ, ರೈತ ಮುಖಂಡರಾದ ಸುನಂದಾ ಜಯರಾಂ, ಇಂಡವಾಳು ಚಂದ್ರಶೇಖರ್, ಕನ್ನಡಸೇನೆ ಮಂಜುನಾಥ್ ಸೇರಿ ಹಲವರು ಭಾಗಿ.
ಪ್ರತಿಭಟನೆಯಲ್ಲಿ ರೈತ ನಾಯಕಿ ಸುನಂದಾ ಜಯರಾಂ ಮಾತನಾಡಿ, ಕಾವೇರಿ ನದಿ ತೀರ್ಪು ಸೋಮವಾರಕ್ಕೆ ಮುಂದೂಡಿದ್ದಾರೆ. ಇದರಲ್ಲಿ ಅನುಮಾನ ವ್ಯಕ್ತವಾಗುತ್ತಿದೆ. ಸರ್ಕಾರ ಬೇಜವಬ್ದಾರಿಯಿಂದ ನಡೆದುಕೊಳ್ತಿದೆ. ರೈತರ ಹಿತಕಾಯುವ ಬದಲು ರೈತರ ಕತ್ತು ಕೊಯ್ಯುವ ಕೆಲಸವನ್ನು ಸರ್ಕಾರ ಮಾಡಿದೆ. ದಿನೇ ದಿನೇ ಕಾವೇರಿ ನೀರು ತಮಿಳುನಾಡಿಗೆ ಹರಿದು ಹೊಗ್ತಿದೆ. ಸರ್ಕಾರ ಕೂಡಲೇ ಕ್ರಮ ವಹಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಸಂಸದೆ ಸುಮಲತಾ ವಿರುದ್ಧ ಕೆ.ಟಿ.ಶ್ರೀಕಂಠೇಗೌಡ ವಾಗ್ದಾಳಿ
ಕಾವೇರಿ ವಿಚಾರದಲ್ಲಿ ಸಂಸದರ ಪಾತ್ರ ಬಹಳ ದೊಡ್ಡದಿದೆ. ಆದರೂ ನಮ್ಮ ಸಂಸದರು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ ಎಂದು ಸಂಸದೆ ಸುಮಲತಾ ವಿರುದ್ದ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ವಾಗ್ದಾಳಿ ನಡೆಸಿದ್ದಾರೆ
ಜಿಲ್ಲೆಯ ಶಾಸಕರು ಕಾವೇರಿ ವಿಚಾರದಲ್ಲಿ ಮೌನ ವಹಿಸಿದ್ದಾರೆ. ಅವರ ಮೌನ ನಮಗೆ ಅರ್ಥವಾಗ್ತಿಲ್ಲ. ದಯಮಾಡಿ ಜಿಲ್ಲೆಯ ಶಾಸಕರು-ಸಂಸದರು ಧ್ವನಿ ಎತ್ತಿ. ರೈತರ ಹೋರಾಟದಲ್ಲಿ ಪಾಲ್ಗೊಳ್ಳಿ. ಇಲ್ಲ ನಿಮ್ಮ ವಿರುದ್ಧ ವೇ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಂಸದೆ ಸುಮಲತಾ ಅವರ ಕರ್ತವ್ಯ ಲೋಪದ ಬಗ್ಗೆ ಹಲವರು ಟೀಕೆ ಮಾಡಿದ್ದಾರೆ. ಈ ಹಿಂದೆ ನಿರಂತರವಾಗಿ ಹೋರಾಟಕ್ಕೆ ದುಮುಕುತ್ತಿದ್ದರು. ಕೇಂದ್ರದಲ್ಲಿ ಮಾತನಾಡ್ತಿದ್ರು. ನಮ್ಮ ಸಂಸದರು ಹುಟ್ಟುಹಬ್ಬದ ಆಚರಣೆಯಲ್ಲಿ ಬಿಜಿ ಇದ್ದಾರೆ. ರೈತರ ಹಿತವನ್ನ ಬದಿಗೊತ್ತಿದ್ದಾರೆ ಅದಕ್ಕೆ ರೈತರೆ ತಕ್ಕ ಉತ್ತರ ಕೊಡ್ತಾರೆ. ಬಿಜೆಪಿಯವರು ಹೋರಾಟ ಮಾಡ್ತಿದ್ದಾರೆ. ಸಂಸದರು ಬರ್ತಿಲ್ಲ. ಹೋರಾಟ ಅನಿವಾರ್ಯವಾಗಿದೆ. ತಮಿಳುನಾಡಿಗೆ ನೀರು ಹರಿದು ಹೋಗುತ್ತಿದ್ದು, ನೀರು ನಿಲ್ಲಿಸುವಂತೆ ಆಗ್ರಹಿಸುತ್ತೇವೆ ಎಂದರು.
ಕಾವೇರಿ ಹೋರಾಟಕ್ಕೆಮಾಜಿ ಸಚಿವ, ಜೆಡಿಎಸ್ ಮುಖಂಡ ಸಿ.ಎಸ್.ಪುಟ್ಟರಾಜು ಸಾಥ್ ನೀಡಿದ್ದಾರೆ.
ಹೆದ್ದಾರಿ ತಡೆದು ಅನ್ನದಾತರ ಪ್ರತಿಭಟನೆ
ರಾಜ್ಯ ರೈತ ಸಂಘದ ಕಾರ್ಯಕರ್ತರು ಮಂಡ್ಯದ ಸಂಜಯ ವೃತ್ತದಲ್ಲಿ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರಿಂದಾಗಿ ಕೆಲ ಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿದ್ದು, ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ರಾಜ್ಯ ಸರ್ಕಾರ, ಕಾವೇರಿ ಪ್ರಾಧಿಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ಕುಡಿಯುವ ನೀರಿಗೂ ಹಾಹಾಕಾರ ಎದುರಾಗಲಿದೆ. ಆದ್ದರಿಂದ ಬೆಂಗಳೂರಿನವರು ಸಹ ಕಾವೇರಿ ಹೋರಾಟಕ್ಕೆ ಬರುವಂತೆ ಆಗ್ರಹಿಸಿದರು. ಜೊತೆಗೆ ಚಲನಚಿತ್ರ ನಟರು ಸಹ ರೈತರಿಗೆ ಬೆಂಬಲ ನೀಡುವಂತೆ ಒತ್ತಾಯಿಸಿದರು.
ಶ್ರೀರಂಗಪಟ್ಟಣದಲ್ಲಿ ರೈತರಿಂದ ಬಾರುಕೋಲು ಚಳವಳಿ
ಕೆಆರ್ ಎಸ್ ಜಲಾಶಯದಿಂದ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿರುವ ಹಿನ್ನಲೆ ರಾಜ್ಯ ಸರ್ಕಾರ ಕ್ರಮ ಖಂಡಿಸಿ ಶ್ರೀರಂಗಪಟ್ಟಣದಲ್ಲಿ ರೈತರಿಂದ ವಿನೂತನವಾಗಿ ಬಾರುಕೋಲು ಚಳವಳಿ ನಡೆಸಲಾಯಿತು.
ಭೂಮಿತಾಯಿ ಹೋರಾಟ ಸಮಿತಿ ವತಿಯಿಂದ ಪಟ್ಟಣದ ಕುವೆಂಪು ವೃತ್ತದ ಬಳಿ ಬಾರುಕೋಲು ಹಿಡಿದು ರೈತರು ಚಳವಳಿ ನಡೆಸಿದ್ದು, ಸರ್ಕಾರಕ್ಕೆ ಚಾಟಿ ಬೀಸದ್ದಾರೆ.
ಕೂಡಲೇ ನೀರು ನಿಲ್ಲಿಸಿ ಇಲ್ಲದಿದ್ದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ ರೈತರು ಜಲ ಸಂಪೂನ್ಮೂಲ ಸಚಿವ ಡಿ ಕೆ ಶಿವಕುಮಾರ್ ರಾಜೀನಾಮೆಗೆ ಒತ್ತಾಯಿಸಿದರು.