ಮನೆ ರಾಷ್ಟ್ರೀಯ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನಿವಾಸದ ಮೇಲೆ ಸಿಬಿಐ ದಾಳಿ

ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನಿವಾಸದ ಮೇಲೆ ಸಿಬಿಐ ದಾಳಿ

0

ನವದೆಹಲಿ(Newdelhi): ಹೊಸ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಬೆಳ್ಳಂಬೆಳಗ್ಗೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿವಾಸದ ಮೇಲೆ ದಾಳಿ ನಡೆಸಿರುವ ಸಿಬಿಐ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಸಿಬಿಐ ಅಧಿಕಾರಿಗಳ ಹಲವು ತಂಡಗಳು ದೆಹಲಿ-ಎನ್ ಸಿಆರ್ ಪ್ರದೇಶಗಳಲ್ಲಿ 21 ಕಡೆ ಏಕಕಾಲಕ್ಕೆ ದಾಳಿ ಆರಂಭಿಸಿದ್ದಾರೆ. ಹಿಂದಿನ ದೆಹಲಿಯ ಅಬಕಾರಿ ಇಲಾಖೆ ಆಯುಕ್ತ ಅರವ ಗೋಪಿಕೃಷ್ಣ ಅವರ ನಿವಾಸ ಮೇಲೆ ಕೂಡ ದಾಳಿ ನಡೆದಿದೆ. 

ಈ ಕುರಿತು ಟ್ವೀಟ್ ಮಾಡಿರುವ ಮನೀಶ್ ಸಿಸೋಡಿಯಾ, ಸಿಬಿಐ ಅಧಿಕಾರಿಗಳು ನನ್ನ ಮನೆಯಲ್ಲಿದ್ದಾರೆ. ನಾನು ತನಿಖಾ ಸಂಸ್ಥೆಯೊಂದಿಗೆ ಸಹಕರಿಸುತ್ತೇನೆ. ಅವರಿಗೆ ನನ್ನ ವಿರುದ್ಧ ಏನೂ ಸಾಕ್ಷಿಗಳು ಸಿಗುವುದಿಲ್ಲ ಎಂಬ ನಂಬಿಕೆ ನನಗಿದೆ. ದೇಶದಲ್ಲಿ ಒಳ್ಳೆಯ ಕೆಲಸ ಮಾಡುವವರಿಗೆ ಈ ರೀತಿ ತೊಂದರೆಯಾಗುತ್ತಲೇ ಇರುತ್ತದೆ. ನಾವು ಪ್ರಾಮಾಣಿಕರು, ಲಕ್ಷಾಂತರ ಮಕ್ಕಳ ಭವಿಷ್ಯವನ್ನು ನಿರ್ಮಿಸುತ್ತೇವೆ. ದುರದೃಷ್ಟಕರ ಸಂಗತಿ ಎಂದರೆ ಈ ದೇಶದಲ್ಲಿ ಒಳ್ಳೆಯ ಕೆಲಸ ಮಾಡುವವರಿಗೆ ಈ ರೀತಿ ತೊಂದರೆಯಾಗುತ್ತದೆ. ಅದಕ್ಕಾಗಿಯೇ ನಮ್ಮ ದೇಶ ಇನ್ನೂ ನಂಬರ್ 1 ಆಗಿಲ್ಲ ಎಂದಿದ್ದಾರೆ.

ನಾವು ಸಿಬಿಐ ಅನ್ನು ಸ್ವಾಗತಿಸುತ್ತೇವೆ. ಸತ್ಯ ಹೊರಬರಲು ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಇದುವರೆಗೂ ನನ್ನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದರೂ ಯಾವುದಕ್ಕೂ ಸಾಕ್ಷಿ ಸಿಕ್ಕಿಲ್ಲ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಸಿಬಿಐ ದಾಳಿ ಸ್ವಾಗತಿಸುತ್ತೇವೆ: ದಾಳಿ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದು, ಅಮೆರಿಕದ ದೊಡ್ಡ ಸುದ್ದಿ ಪತ್ರಿಕೆ ದೆಹಲಿ ಸರ್ಕಾರದ ಶಿಕ್ಷಣ ವ್ಯವಸ್ಥೆಯನ್ನು ಹೊಗಳಿ ಬರೆದಿರುವ ದಿನ ಸಿಬಿಐ ದಾಳಿ ನಡೆದಿದೆ. ಅವರನ್ನು ಸ್ವಾಗತಿಸುತ್ತೇವೆ. ಇದೊಂದು ದುರಂತ ಎಂದಿದ್ದಾರೆ.

ಅಬಕಾರಿ ನೀತಿ 2021-22ರ ಜಾರಿಯಲ್ಲಿ ಗಂಭೀರ ಲೋಪದೋಷವಾಗಿದೆ ಎಂಬ ಆರೋಪ ಮೇಲೆ 11 ಮಂದಿ ಅಧಿಕಾರಿಗಳ ಅಮಾನತಿಗೆ ಇದಕ್ಕೂ ಮೊದಲು ಲೆಪ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನ ಅನುಮೋದನೆ ನೀಡಿದ್ದರು. ಅಮಾನತುಗೊಂಡ ಅಧಿಕಾರಿಗಳಲ್ಲಿ ಗೋಪಿಕೃಷ್ಣ ಮತ್ತು ಅಬಕಾರಿ ಇಲಾಖೆ ಉಪ ಆಯುಕ್ತ ಆನಂದ್ ಕುಮಾರ್ ತಿವಾರಿ ಕೂಡ ಇದ್ದಾರೆ.