ಹಾವೇರಿ: ಅಕ್ರಮ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ್ ಆಲದರ್ತಿ ಅವರ ಮನೆಯಲ್ಲಿ ಲೋಕಾಯುಕ್ತ ಪೊಲೀಸರು ಬುಧವಾರ ಬೆಳಿಗ್ಗೆಯಿಂದ ಪರಿಶೀಲನೆ ಆರಂಭಿಸಿದ್ದಾರೆ.
ರಾಣೆಬೆನ್ನೂರಿನಲ್ಲಿರುವ ಶ್ರೀನಿವಾಸ್ ಮನೆಗೆ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳಿಗ್ಗೆಯೇ ಬಂದಿದ್ದರು. ಆದರೆ, ಶ್ರೀನಿವಾಸ್ ಮನೆಯಲ್ಲಿ ಇರಲಿಲ್ಲ. ಯಾದಗಿರಿಗೆ ಹೋಗಿದ್ದರು. ಅವರು ವಾಪಸು ಬರಬಹುದೆಂದು ಪೊಲೀಸರು, ಮಂಗಳವಾರ ತಡರಾತ್ರಿಯವರೆಗೂ ಕಾಯುತ್ತಿದ್ದರು.
ತಡರಾತ್ರಿ ಶ್ರೀನಿವಾಸ್ ಅವರ ಮನೆಗೆ ಬಂದಿದ್ದರು. ಅವರಿಗೆ ಬಾಗಿಲು ತೆರೆಯಲು ಅವಕಾಶ ನೀಡದ ಪೊಲೀಸರು, ಮನೆಯೊಳಗೆ ಬಿಟ್ಟಿರಲಿಲ್ಲ. ಅತಿಥಿಗೃಹದಲ್ಲಿ ಉಳಿದುಕೊಂಡು ಬುಧವಾರ ಬೆಳಿಗ್ಗೆಯೇ ಮನೆಗೆ ಬರುವಂತೆ ಸೂಚಿಸಿದ್ದರು. ರಾತ್ರಿಯೀಡಿ ಮನೆ ಸುತ್ತಮುತ್ತ ಸ್ಥಳಿಯ ಪೊಲೀಸರು ಕಾವಲು ಕಾಯುತ್ತಿದ್ದರು.
ಅತಿಥಿ ಗೃಹದಲ್ಲಿ ರಾತ್ರಿ ತಂಗಿದ್ದ ಶ್ರೀನಿವಾಸ್ ಕುಟುಂಬ, ಬುಧವಾರ ಬೆಳಿಗ್ಗೆ ಮನೆಗೆ ಬಂದಿದ್ದಾರೆ. ಅವರಿಂದ ಬಾಗಿಲು ತೆಗೆಸಿರುವ ಲೋಕಾಯುಕ್ತ ಪೊಲೀಸರು, ಪರಿಶೀಲನೆ ಆರಂಭಿಸಿದ್ದಾರೆ.
ಶ್ರೀನಿವಾಸ್ ಮನೆಯಲ್ಲಿ ಪರಿಶೀಲನೆ ನಡೆಸಲು ಅಧಿಕಾರಿಗಳು ಇಡೀ ದಿನ ಕಾದರು. ಅವರು ತಡರಾತ್ರಿ ಬಂದಿದ್ದರಿಂದ, ಪರಿಶೀಲನೆ ಸಾಧ್ಯವಾಗಲಿಲ್ಲ. ಹೀಗಾಗಿ, ಬುಧವಾರ ಬೆಳಿಗ್ಗೆಯೇ ಬಾಗಿಲು ತೆಗೆಸಿ ಪರಿಶೀಲನೆ ಆರಂಭಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ಹೇಳಿದರು.