ಬೆಂಗಳೂರು: ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲೇ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮಂಗಳವಾರ 50ಕ್ಕೂ ಹೆಚ್ಚು ಸಿಸಿಬಿ ಅಧಿಕಾರಿಗಳು ಜೈಲಿನ ಮೇಲೆ ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಜೈಲಿನಿಂದಲೇ ಸಂಚು ಹೂಡಲಾಗಿದೆ ಎಂಬ ಸುಳಿವಿನ ಮೇರೆಗೆ ಸಿಸಿಬಿ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.
ಜೈಲಿನಿಂದಲೇ ಕೊಲೆಗೆ ಸುಪಾರಿ ನೀಡಿರುವುದು, ಉಗ್ರ ಚಟುವಟಿಕೆಗಳ ನಂಟು ಹೊಂದಿರುವುದು ಮತ್ತು ಜೈಲಿನಿಂದಲೇ ಮತದಾರರ ಮೇಲೆ ಪ್ರಭಾವ ಬೀರಲು ಸಂಚು ಬಗ್ಗೆ ಮಾಹಿತಿ ದೊರೆತಿದೆ. ಹೀಗಾಗಿ ದಾಳಿ ನಡೆಸಲಾಗಿದೆ. ಈ ವೇಳೆ ಜೈಲಿನ ಬ್ಯಾರಕ್ನಲ್ಲಿದ್ದ ಕೆಲ ಖೈದಿಗಳ ಬಳಿಯಿಂದ ನಗದು ವಶಕ್ಕೆ ಪಡೆಯಲಾಗಿದೆ. ಜೈಲಿನೊಳಗೆ ಚಾಕು ಸಹ ಪತ್ತೆಯಾಗಿದೆ. ಕೈದಿಗಳ ಬಳಿ ಇದ್ದ 40 ಸಾವಿರ ರೂ. ನಗದು, 3 ಚಾಕು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರಾಗೃಹದ ಒಳಗಿನಿಂದ ಚುನಾವಣೆ ಮೇಲೆ ಪ್ರಭಾವ ಬೀರಲು ಪಿತೂರಿ, ಅಕ್ರಮ ಚಟುವಟಿಕೆಗಳು, ಡ್ರಗ್ಸ್ ಬಳಕೆ, ಪೂರೈಕೆ ಮತ್ತು ಮೊಬೈಲ್ ಬಳಕೆಯನ್ನು ಪರಿಶೀಲಿಸಲು ಈ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಗದು, ತಂಬಾಕು ಉತ್ಪನ್ನಗಳು ಮತ್ತು ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದೂ ಮೂಲಗಳು ತಿಳಿಸಿವೆ.