ಮೈಸೂರು(Mysuru): ಆಷಾಢಮಾಸದ ಮೂರನೇ ಶುಕ್ರವಾರದಂದು ನಾಡಿನ ಅಧಿದೇವತೆ ಚಾಮುಂಡೇಶ್ವರಿ ತಾಯಿಗೆ ಬೆಳಗಿನ ಜಾವದಿಂದಲೇ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು.
ಬೆಟ್ಟದ ತಾಯಿ ಚಾಮುಂಡೇಶ್ವರಿ ದೇವಿಗೆ ಲಕ್ಷ್ಮೀ ಅಲಂಕಾರ ಮಾಡಲಾಗಿದ್ದು, ಬೆಳಗಿನ ಜಾವ 3:30 ರಿಂದಲೇ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರ ನಾಮಾರ್ಚನೆ ಮಹಾಮಂಗಳಾರತಿ ಮಾಡಿದ ಮೂಲಕ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಭಕ್ತರ ದರ್ಶನಕ್ಕೆ 5.30ರಿಂದ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಶಕ್ತಿ ದೇವತೆಯ ದರ್ಶನ ಪಡೆಯಲು ಮೂರನೇ ವಾರವೂ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ. ವಿವಿಧ ಬಗೆಯ ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿರುವ ದೇವಾಲಯವನ್ನು ಕಣ್ತುಂಬಿಕೊಂಡು ಭಕ್ತಿಭಾವದಿಂದ ತಾಯಿ ಚಾಮುಂಡೇಶ್ವರಿಗೆ ನಮಿಸಿ, ತಾಯಿಯ ಆಶೀರ್ವಾದ ಪಡೆಯುತ್ತಿದ್ದಾರೆ.
ಮೆಟ್ಟಿಲುಗಳ ಮೂಲಕ ಚಾಮುಂಡಿ ಬೆಟ್ಟವನ್ನೇರಿ ಶಕ್ತಿ ದೇವತೆ ದರ್ಶನಕ್ಕೆ ಭಕ್ತಾದಿಗಳು ಆಗಮಿಸುತ್ತಿದ್ದಾರೆ.
ಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಭಕ್ತರಿಗೆ ದೇವಿಯ ದರ್ಶನಕ್ಕೆ ಸುಗಮ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಚಾಮುಂಡಿ ಬೆಟ್ಟಕ್ಕೆ ಸಂಚರಿಸುವುದನ್ನು ತಪ್ಪಿಸಲು ಪಾಸ್ ರದ್ದು ಮಾಡಲಾಗಿದೆ.