ಬೆಂಗಳೂರು : ವೈಜ್ಞಾನಿಕ ಮನೋಭಾವನೆ ಅಳವಡಿಸಿಕೊಳ್ಳುವ ಪ್ರತಿಜ್ಞಾ ವಿಧಿಯನ್ನು ಭೋಧಿಸುವ ಮೂಲಕ ಈ ಬಾರಿಯ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನ ವಿನೂತನವಾಗಿ ಆಚರಿಸಲಾಗುವುದು ಎಂದು ಮಾನ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್ ಭೋಸರಾಜು ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ಪ್ರತಿವರ್ಷ ಫೆಬ್ರವರಿ 28 ರಂದು ಸರ್ ಸಿ.ವಿ ರಾಮನ್ ರ “ರಾಮನ್ ಪರಿಣಾಮ” ಆವಿಷ್ಕಾರದ ಸ್ಮರಣಾರ್ಥವಾಗಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಗುತ್ತದೆ. ದೇಶ ಹಾಗೂ ರಾಜ್ಯಗಳ ಪ್ರಗತಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆ ಅಪಾರ. ನಮ್ಮ ಸರಕಾರವು ಈಗಾಗಲೇ ಸರ್ವರಿಗೂ ವಿಜ್ಞಾನ ಹಾಗೂ ಸುಲಭ ವಿಜ್ಞಾನ ಎಂಬ ಧ್ಯೇಯವಾಕ್ಯದೊಂದಿಗೆ ಎಲ್ಲ ಜಿಲ್ಲೆಗಳಲ್ಲಿ ಹಂತಹಂತವಾಗಿ ವಿಜ್ಞಾನ ಕೇಂದ್ರಗಳನ್ನು ಹಾಗೂ ತಾರಾಲಯಗಳನ್ನು ಸ್ಥಾಪಿಸಲಾಗುತ್ತಿದೆ.
ಬೆಂಗಳೂರಿನಲ್ಲಿ ವಿಜ್ಞಾನ ನಗರ, ಶಾಲಾ ಮಕ್ಕಳಲ್ಲಿ ವಿಜ್ಞಾನ ಕಲಿಕೆ ಉತ್ತೇಜನಕ್ಕೆ ಟೆಲಿಸ್ಕೋಪ್ ಒದಗಿಸುವ ಯೋಜನೆ, ಉನ್ನತ ಶಿಕ್ಷಣಕ್ಕೆ ಆರ್ಥಿಕ ನೇರವು, ಸಂಚಾರಿ ತಾರಾಯಲಯದ ಮೂಲಕ ಗ್ರಾಮೀಣ ಮಕ್ಕಳಲ್ಲಿ ಖಗೋಳಶಾಸ್ತ್ರದ ಅರಿವು ಮೂಡಿಸುವ ಕಾರ್ಯಕ್ರಮ ಇಂತಹ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇವೆ. ಮೂಢನಂಬಿಕೆಗಳ ವಿರುದ್ದ ತರ್ಕಬದ್ದವಾಗಿ ಆಲೋಚಿಸುವಂತೆ ಜನರನ್ನ ಪ್ರೇರೇಪಿಸುವ ನಿಟ್ಟಿನಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವುದು ಬಹಳ ಮುಖ್ಯ. ಪ್ರಗತಿಪರ ಸಮಾಜ ನಿರ್ಮಾಣ ನಮ್ಮ ಸರಕಾರದ ಮೂಲ ಉದ್ದೇಶವಾಗಿದೆ. ಈ ಹಿನ್ನಲೆಯಲ್ಲಿ ಈ ಬಾರಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ರಾಷ್ಟ್ರಿಯ ವಿಜ್ಞಾನ ದಿನಾಚರಣೆಯನ್ನು ವಿನೂತನವಾಗಿ ಆಚರಿಸಲು ನಿರ್ಧರಿಸಲಾಗಿದೆ.
ಮೊದಲ ಬಾರಿಗೆ ಮುಖ್ಯಮಂತ್ರಿಗಳಿಂದ “ವೈಜ್ಞಾನಿಕ ಮನೋಭಾವನೆ ಅಳವಡಿಸಿಕೊಳ್ಳುವ ಪ್ರತಿಜ್ಞಾ ವಿಧಿ” ಭೋಧನೆ:
ಶಾಂತಿಯುತ, ಪ್ರಗತಿಪರ ಹಾಗೂ ಸಮೃದ್ದ ಸಮಾಜದ ನಿರ್ಮಾಣಕ್ಕಾಗಿ ಮತ್ತು ವೈಜ್ಞಾನಿಕ ಮನೋಭಾವವನ್ನ ಇನ್ನಷ್ಟು ಪ್ರಚುರ ಪಡಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಂದು “ವೈಜ್ಞಾನಿಕ ಮನೋಭಾವನೆ ಅಳವಡಿಸಿಕೊಳ್ಳುವ ಪ್ರತಿಜ್ಞಾ ವಿಧಿಯನ್ನು” ಸನ್ಮಾನ್ಯ ಮುಖ್ಯಮಂತ್ರಿಗಳು ಭೋಧಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಅವರೆಲ್ಲರಿಗೂ ಪ್ರತಿಜ್ಞಾ ವಿಧಿಯನ್ನು ಭೋಧಿಸಲಾಗುವುದು. ಅಲ್ಲದೇ, ಪ್ರತಿ ಶೈಕ್ಷಣಿಕ ಸಂಸ್ಥೆಗಳಲ್ಲೂ ಪ್ರತಿಜ್ಞಾ ವಿಧಿಯನ್ನು ಭೋಧಿಸುವಂತೆ ಮುಂದಿನ ದಿನಗಳಲ್ಲಿ ಸುತ್ತೋಲೆಯನ್ನು ಹೊರಡಿಸಲು ಚಿಂತಿಸಲಾಗುತ್ತಿದೆ.
ಫೆ 28 ರಂದು ಜವಾಹರ್‌ಲಾಲ್ ನೆಹರು ತಾರಾಲಯದಲ್ಲಿ ಬೆಳಿಗ್ಗೆ 11 ಗಂಟೆಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು. ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್, ಸಭಾಪತಿಗಳಾದ ಬಸವರಾಜ ಹೊರಟ್ಟಿ, ಸಭಾಧ್ಯಕ್ಷರಾದ ಯು ಟಿ ಖಾದರ್ ಸೇರಿದಂತೆ ಮಂತ್ರಿಗಳು ಉಪಸ್ಥಿತರಿರಲಿದ್ದಾರೆ ಎಂದು ಸಚಿವರು ತಮ್ಮ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.