ಮನೆ ಸುದ್ದಿ ಜಾಲ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಕನಕದಾಸ ಜಯಂತಿ ಆಚರಣೆ: ಡಾ.ಬಿ.ಮಂಜುನಾಥ ಸ್ವಾಮಿ

ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಕನಕದಾಸ ಜಯಂತಿ ಆಚರಣೆ: ಡಾ.ಬಿ.ಮಂಜುನಾಥ ಸ್ವಾಮಿ

0

ಮೈಸೂರು(Mysuru): ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಕನಕದಾಸ ಜಯಂತಿ ಹಾಗೂ ವೀರ ವನಿತೆ ಒನಕೆ ಓಬವ್ವ ಜಯಂತಿಯನ್ನು ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳಾದ ಡಾ.ಬಿ.ಮಂಜುನಾಥ ಸ್ವಾಮಿ ತಿಳಿಸಿದರು.


 ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಕನಕದಾಸ ಜಯಂತಿ ಹಾಗೂ ಒನಕೆ ಓಬವ್ವ ಜಯಂತಿ ಆಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನವಂಬರ್ 11 ರಂದು ಕನಕದಾಸ ಜಯಂತಿ ಹಾಗೂ ಒನಕೆ ಓಬವ್ವ ಜಯಂತಿಯನ್ನು ಕಲಾಮಂದಿರದಲ್ಲಿ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು.
 ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ  ಡಾ.ಎಂ.ಡಿ.ಸುದರ್ಶನ್ ಮಾತನಾಡಿ, ಕನಕದಾಸ ಜಯಂತಿ ಹಾಗೂ ಒನಕೆ ಓಬವ್ವ ಜಯಂತಿಯನ್ನು ಕಲಾಮಂದಿರದಲ್ಲಿ ಆಚರಣೆ ಮಾಡಲಾಗುವುದು. ಮೆರವಣಿಗೆಯ ಉದ್ಘಾಟನೆಯನ್ನು ಬೆಳಿಗ್ಗೆ 10 ಗಂಟೆಗೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪ್ರಾರಂಭಿಸಲಾಗುವುದು ಮಧ್ಯಾಹ್ನ 12:30 ಗಂಟೆಗೆ ವೇದಿಕೆ ಕಾರ್ಯಕ್ರಮಗಳನ್ನು ಕಲಾಮಂದಿರದಲ್ಲಿ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದರು.

ಕಲಾತಂಡಗಳು ಹಾಗೂ ಗಾಯನ ತಂಡಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡಲಾಗುವುದು ಎಂದು ತಿಳಿಸಿದರು.
 ಜಯಂತೋತ್ಸವ ಸಮಿತಿಯ ಮುಖಂಡರು ಮಾತನಾಡಿ, ಕನಕದಾಸ ಜಯಂತಿಯ ಮೆರವಣಿಗೆಯು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಉದ್ಘಾಟನೆಗೊಂಡು ಕೆ.ಆರ್.ಸರ್ಕಲ್, ಮೈಸೂರು ಮಹಾನಗರ ಪಾಲಿಕೆ, 100 ಅಡಿ ರಸ್ತೆ, ಅರಸು ರಸ್ತೆಯ ಮೂಲಕ ಕಲಾಮಂದಿರವನ್ನು ತಲುಪಬೇಕು ಕಾರ್ಯಕ್ರಮದಲ್ಲಿ ಉತ್ತಮ ಅಂಕಗಳನ್ನು ಪಡೆದ ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಬೇಕು ಮತ್ತು ಎಲ್ಲಾ ಸಮಾಜದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಮಾಡಬೇಕು ಎಂದು ಬೇಡಿಕೆಯನಿಟ್ಟರು.
 ಸಭೆಯಲ್ಲಿ ಜಯಂತೋತ್ಸವ ಸಮಿತಿಯ ಅಧ್ಯಕ್ಷರು ಮತ್ತು ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಶಿವಕುಮಾರ್, ಮೈಸೂರು ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಸವಿತಾ, ಜಯಂತೋತ್ಸವ ಸಮಿತಿಯ ಸದಸ್ಯರು ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.