ಮೈಸೂರು(Mysuru): ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡಗಳ ಕೇಂದ್ರ ಸ್ಥಾಪಿಸಲಾಗುತ್ತಿದ್ದು, ಅವು ಮೈಸೂರನ್ನು ಕೇಂದ್ರವನ್ನಾಗಿಸಿಕೊಂಡು ಕಾರ್ಯನಿರ್ವಹಿಸಲಿವೆ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು.
ಇಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, 75 ಎಕರೆ ಜಾಗದಲ್ಲಿ ಹೆಲಿಪ್ಯಾಡ್ ನಿರ್ಮಿಸಿ, ಅಲ್ಲಿ ತಂಡಗಳನ್ನು ಇರಿಸಲಾಗುವುದು. ಇದರಿಂದಾಗಿ, ಇಲ್ಲಿಂದ ಇತರ ಜಿಲ್ಲೆಗಳಿಗೂ ತಂಡಗಳನ್ನು ನಿಯೋಜಿಸಲು ಅನುಕೂಲವಾಗಲಿದೆ. ಕೆಲವೇ ತಿಂಗಳಲ್ಲಿ ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು ಎಂದರು.
ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೀಡಾಗಿರುವ ಪ್ರದೇಶಗಳಲ್ಲಿ ಸಮರೋಪಾದಿಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಾಲ್ಕೈದು ವರ್ಷಗಳಿಂದ ಸತತವಾಗಿ ಭೂಕುಸಿತವಾಗುತ್ತಿದೆ. ಮಡಿಕೇರಿಯಿಂದ ಸಂಪಾಜೆವರೆಗೆ ತಡೆಗೋಡೆ ನಿರ್ಮಿಸಲಾಗಿದೆ. ಹೊಸದಾಗಿ 22 ತಡೆಗೋಡೆ ಕಟ್ಟಲು ಸೂಚಿಸಲಾಗಿದೆ. ಜನ–ಜಾನುವಾರುಗಳ ರಕ್ಷಣೆಗೆ ಸೂಕ್ತ ಕ್ರಮ ಜರುಗಿಸಲಾಗಿದೆ. ಅನುದಾನ ಲಭ್ಯವಿದ್ದು, ಬಳಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ’ ಎಂದು ಹೇಳಿದರು.














