ಬೆಂಗಳೂರು : ಉದ್ಯಮಿಗೆ ಎಂಎಲ್ ಎ ಟಿಕೆಟ್ ಕೊಡಿಸುವುದಾಗಿ ವಂಚಿಸಿದ್ದ ಚೈತ್ರಾ ಅಂಡ್ ಗ್ಯಾಂಗ್ ನ ಏಳು ಜನ ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ 3ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.
ಆರೋಪಿಗಳಾದ ಚೈತ್ರಾ ಕುಂದಾಪುರ, ಗಗನ್, ರಮೇಶ್, ಧನರಾಜ್, ಶ್ರೀಕಾಂತ್, ಪ್ರಜ್ವಲ್ ಹಾಗೂ ಚೆನ್ನಾನಾಯ್ಕ್ ಕಸ್ಟಡಿ ಅವಧಿ ಇಂದು ಅಂತ್ಯವಾದ ಹಿನ್ನೆಲೆಯಲ್ಲಿ, ಸಿಸಿಬಿ ಪೊಲೀಸರು ನ್ಯಾಯಾಲಯದ ಮುಂದೆ ಆರೋಪಿಗಳನ್ನ ಹಾಜರುಪಡಿಸಲಿದ್ದರು.
ಸಿಸಿಬಿ ತನಿಖೆಗೆ ಮತ್ತೆ ಅವಶ್ಯಕತೆ ಇಲ್ಲವೆಂದು ತನಿಖಾಧಿಕಾರಿ ಸ್ಪಷ್ಟಪಡಿಸಿದ ಕಾರಣ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಹಾಗೂ ಆರೋಪಿಗಳ ಪರ ವಕೀಲರು ಸಲ್ಲಿಸಿರುವ ಜಾಮೀನು ಅರ್ಜಿಗೆ ಸೆಪ್ಟೆಂಬರ್ 26 ರಂದು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ಇದೇ ಸಂದರ್ಭದಲ್ಲಿ ಪ್ರಕರಣವೊಂದರ ವಿಚಾರಣೆಗಾಗಿ ಆರೋಪಿ ಚೈತ್ರಾಳನ್ನ ಬಾಡಿ ವಾರೆಂಟ್ ಆಧಾರದಲ್ಲಿ ವಶಕ್ಕೆ ನೀಡುವಂತೆ ಉಡುಪಿಯ ಕೋಟಾ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಬಟ್ಟೆ ಅಂಗಡಿ ಹಾಕಿ ಕೊಡುವುದಾಗಿ 2018 ರಿಂದ 2023ರವರೆಗೆ ಹಂತ ಹಂತವಾಗಿ 5 ಲಕ್ಷ ರೂಪಾಯಿ ಪಡೆದು ಚೈತ್ರಾ ತಮಗೆ ಮೋಸ ಮಾಡಿರುವುದಾಗಿ ಸುದೀನ್ ಎಂಬುವವರು ಕೋಟಾ ಪೊಲೀಸ್ ಠಾಣಾ ಮೆಟ್ಟಿಲೇರಿದ್ದರು. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾಳ ವಿಚಾರಣೆ ಮಾಡಬೇಕಾಗಿದೆ, ಆದ್ದರಿಂದ ಬಾಡಿ ವಾರೆಂಟ್ ಮೂಲಕ ಚೈತ್ರಾ ವಿಚಾರಣೆಗೆ ಅವಕಾಶ ಕಲ್ಪಿಸುವಂತೆ ಕೋಟಾ ಪೊಲೀಸರು ಮನವಿ ಮಾಡಿದ್ದಾರೆ.