ಮನೆ ಸುದ್ದಿ ಜಾಲ ಚಾಮರಾಜನಗರ: ರೈತನ ಮೇಲೆ ದಾಳಿ ಮಾಡಿದ್ದ ಒಂಟಿ ಸಲಗ ಸೆರೆ

ಚಾಮರಾಜನಗರ: ರೈತನ ಮೇಲೆ ದಾಳಿ ಮಾಡಿದ್ದ ಒಂಟಿ ಸಲಗ ಸೆರೆ

0

ಚಾಮರಾಜನಗರ(Chamarajanagar): ತಾಲೂಕಿನ ಬೆಟ್ಟದಮಾದಹಳ್ಳಿ ರೈತನ ಮೇಲೆ ದಾಳಿ ಮಾಡಿದ್ದ ಒಂಟಿ ಸಲಗವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಹಂಚೀಪುರ ಗ್ರಾಮದ ಬಳಿ ಸೆರೆ ಹಿಡಿದಿದ್ದಾರೆ.

ಸೋಮವಾರ ಬೆಳಗ್ಗೆ ಬೆಟ್ಟದಮಾದಹಳ್ಳಿ ರೈತ ದೇವರಾಜಪ್ಪ ಎಂಬುವವರ ಮೇಲೆ ಒಂಟಿ ಸಲಗ ದಾಳಿ ನಡೆಸಿ ತೀವ್ರ ಗಾಯಗೊಳಿಸಿತು. ಜೊತೆಗೆ ರೈತರ ಬಾಳೆ ಫಸಲು, ಹುರುಳು, ತಂತಿ ಬೇಲಿ ಸೇರಿದಂತೆ ಇತರೆ ಬೆಳೆಗಳನ್ನು ತುಳಿದು ನಾಶಪಡಿಸಿತ್ತು. ವಲಯ ಅರಣ್ಯಾಧಿಕಾರಿ ನವೀನ್‍ಕುಮಾರ್ ಹಾಗು ಸಿಬ್ಬಂದಿ ಆನೆ ಸೆರೆಗೆ ಹರ ಸಾಹಸ ನಡೆಸಿದರು ಕೂಡ ಪ್ರಯೋಜನವಾಗಿರಲಿಲ್ಲ. ನಂತರ ಸೋಮವಾರ ರಾತ್ರಿ ಓಂಕಾರ ಅರಣ್ಯದತ್ತ ತೆರಳಿದೆ.

ಮಂಗಳವಾರ ಬೆಳಗ್ಗೆ ಓಂಕಾರ ವಲಯಕ್ಕೆ ಹೊಂದಿ ಕೊಂಡಂತಿರುವ ಹಂಚೀಪುರ ಬಳಿ ಆನೆ ಕಾಣಿಸಿಕೊಂಡಿದೆ. ಮಂಗಳವಾರ ಬೆಳಗ್ಗೆ ಅಭಿಮನ್ಯು, ಮಹೇಂದ್ರ, ಭೀಮ, ಗಣೇಶ್ ಸಾಕಾನೆಗಳನ್ನು ಹಂಚೀಪುರ ಬಳಿಗೆ ಕರೆ ತಂದರು. ಜೊತೆಗೆ ಪಶು ವೈದ್ಯರಾದ ಡಾ.ಮುಜೀಬ್, ಡಾ.ವಾಸೀಂ, ಡಾ.ರಮೇಶ್ ಹಾಗು ಶೂಟರ್ ಸಹಾಯಕ ಅಕ್ರಂ ಹಾಗು ಸಿಬ್ಬಂದಿ ಜಮಾಯಿಸಿದರು. ಮಧ್ಯಾಹ್ನ ಆನೆ ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿ ನಂತರ ಆನೆಗೆ ಅರವಳಿಕೆ ಮದ್ದು ನೀಡಿದ ಬಳಿಕ ಆನೆ ನಿತ್ರಾಣವಾಯಿತು. ತದ ನಂತರ ಆನೆಯನ್ನು ನಾಲ್ಕು ಸಾಕಾನೆಗಳು ಸುತ್ತುವರಿದವು. ಈ ವೇಳೆ ಕ್ರೈನ್ ಮೂಲಕ ಲಾರಿಗೆ ಆನೆಯನ್ನು ಹಾಕಿದರು. ನಂತರ ಸೆರೆಯಾದ ಆನೆಯನ್ನು ಲಾರಿ ಮೂಲಕ ಕಲ್ಕರೆ ವಲಯದ ಬಳಿಯ ರಾಂಪುರ ಆನೆ ಶಿಬಿರಕ್ಕೆ ರವಾನಿಸಲಾಗಿದೆ.

ಕಾರ್ಯಾಚರಣೆ ನಡೆಸಿದ ಆನೆ ಸೆರೆಯಾದ ಬಳಿಕ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್‍ಕುಮಾರ್, ಎಸಿಎಫ್ ಜಿ.ರವೀಂದ್ರ, ಕೆ.ಪರಮೇಶ್ ಭೇಟಿ ನೀಡಿದ್ದರು.

ಹಿಂದಿನ ಲೇಖನಹೊರಗಿನ ಆಹಾರಕ್ಕೆ ಕಡಿವಾಣ ಹಾಕುವ ಹಕ್ಕು ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್ ಮಾಲೀಕರಿಗೆ ಇದೆ: ಸುಪ್ರೀಂ ಕೋರ್ಟ್
ಮುಂದಿನ ಲೇಖನಪ್ರೇಮ್ ಜಿ ಟ್ರಸ್ಟೀ ಕಂಪೆನಿಯಿಂದ ₹5,258 ಕೋಟಿ ಹೆಚ್ಚುವರಿ ತೆರಿಗೆಗೆ ಐಟಿ ಇಲಾಖೆ ಬೇಡಿಕೆ; ಹೈಕೋರ್ಟ್’ನಿಂದ ತಡೆ