ಚಾಮರಾಜನಗರ: ತಾಲ್ಲೂಕಿನ ಕೊತ್ತಲವಾಡಿ ಗ್ರಾಮದ ಬಳಿ ಕೊಳೆತ ಸ್ಥಿತಿಯಲ್ಲಿ ಎರಡು ಹುಲಿಗಳ ಕಳೇಬರ ಪತ್ತೆಯಾಗಿದೆ.
ಹುಲಿಗಳು ಮೃತಪಟ್ಟು 10ರಿಂದ 15 ದಿನಗಳು ಆಗಿವೆ ಎಂದು ಹೇಳಲಾಗುತ್ತಿದೆ.
ಗುಂಡ್ಲುಪೇಟೆ ತಾಲ್ಲೂಕು ಮೇಲೂರು-ತೆರಕಣಾಂಬಿ ಗ್ರಾಮಗಳ ಗಡಿಭಾಗದಲ್ಲಿ ಮೇಲೂರು ಗ್ರಾಮದ ಸರ್ವೆ ನಂಬರ್ 107ರ ಬೀಳು ಬಿದ್ದಿರುವ ಜಮೀನಿನಲ್ಲಿ ಒಂದು ವಯಸ್ಕ ಹುಲಿ ಮತ್ತು ಒಂದು ಮರಿ ಹುಲಿಯ ಕಳೇಬರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸ್ಥಳಕ್ಕೆ ಚಾಮರಾಜನಗರ ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಚಾಮರಾಜನಗರ ಪ್ರಾದೇಶಿಕ ವಲಯದ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
ಸದರಿ ಹುಲಿ ಕಳೇಬರ ಪತ್ತೆಯಾದ ಸ್ಥಳ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ಗಡಿಯಿಂದ ಸುಮಾರು 21.00 ಕಿಮೀ ದೂರದಲ್ಲಿರುತ್ತದೆ. ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಗ್ರಾಮದ ಗಡಿಯಿಂದ ಸುಮಾರು 200 ಮೀಟರ್ ದೂರದಲ್ಲಿರುತ್ತದೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಯನ್ವಯ ಮರಣೋತ್ತರ ಪರೀಕ್ಷೆ ನಡೆಸಿ ವರದಿ ಪಡೆದ ನಂತರ ಹುಲಿಯ ಸಾವಿನ ನಿಖರ ಕಾರಣ ತಿಳಿದುಬರಲಿದ್ದು, ಮುಂದಿನ ತನಿಖೆ ಕಾರ್ಯ ಪ್ರಗತಿಯಲ್ಲಿರುತ್ತದೆ.