ಮನೆ ದೇವಸ್ಥಾನ ಚಾಮರಾಜನಗರ: ಮಾದಪ್ಪನ ಬೆಟ್ಟದಲ್ಲಿ ಬುಧವಾರ ದೀಪಾವಳಿ ಜಾತ್ರೆ

ಚಾಮರಾಜನಗರ: ಮಾದಪ್ಪನ ಬೆಟ್ಟದಲ್ಲಿ ಬುಧವಾರ ದೀಪಾವಳಿ ಜಾತ್ರೆ

0

ಚಾಮರಾಜನಗರ(Chamarajanagar): ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬುಧವಾರ ನಡೆಯಲಿರುವ ಮಹಾ ರಥೋತ್ಸವಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ.

ಬುಧವಾರ ಬೆಳಗ್ಗೆ 9.15 ರಿಂದ 9.45 ರ ವರೆಗೆ ಸಾಲೂರು ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಮಹಾ ರಥೋತ್ಸವ ಜರುಗಲಿದ್ದು, ಸಹಸ್ರಾರು ಭಕ್ತರು ಆಗಮಿಸುವ ನಿರೀಕ್ಷೆ ಇದೆ.

ಎರಡು ವರ್ಷಗಳಿಂದ ಕೋವಿಡ್ ಕಾರಣಕ್ಕೆ ದೀಪಾವಳಿ ಜಾತ್ರೆ ಸೇರಿದಂತೆ ಎಲ್ಲಾ ಜಾತ್ರೆ ಹಾಗೂ ಉತ್ಸವಗಳನ್ನು ಸರಳವಾಗಿ ಆಚರಿಸಲಾಗಿತ್ತು. ಹಾಗಾಗಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು ಅದಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ಪ್ರಾಧಿಕಾರದ ಅಧಿಕಾರಿಗಳು ಕೈಗೊಂಡಿದ್ದಾರೆ.

ದೇವರ ದರ್ಶನದ ವೇಳೆ ನೂಕು ನುಗ್ಗಲು ತಡೆಗಟ್ಟಲು ಸರತಿ ಸಾಲು, ನೆರಳಿನ ವ್ಯವಸ್ಥೆ, ಕುಡಿಯುವ ನೀರಿನ ಘಟಕ, ಅಂತರ ಗಂಗೆ, ದಾಸೋಹ ವ್ಯವಸ್ಥೆ ಸೇರಿದಂತೆ ತೊಂಬೆಗಳು ಹಾಗೂ ಅಲ್ಲಲ್ಲಿ ನಲ್ಲಿಗಳ ವ್ಯವಸ್ಥೆ ಮಾಡಲಾಗುತ್ತಿದೆ. ವಿವಿಧ ಕಡೆಗಳಲ್ಲಿ ಸ್ವಚ್ಛತೆ ಕಾಪಾಡಲು ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಚ್ಚುವರಿಯಾಗಿ ಲಾಡು ಕೌಂಟರ್ ತೆರೆಯಲಾಗಿದೆ. ಕೆಎಸ್ಆರ್’ಟಿಸಿ ಕೂಡ ಹೆಚ್ಚುವರಿ ಬಸ್’ಗಳನ್ನು ಹಾಕಲು ಸಿದ್ಧತೆ ಮಾಡಿಕೊಂಡಿದೆ. ಪೊಲೀಸ್ ಇಲಾಖೆ ಕೂಡ ಬಿಗಿ ಬಂದೋಬಸ್ತ್’ಗೆ ಕ್ರಮ ಕೈಗೊಂಡಿದೆ.

ದೀಪಾವಳಿ ಹಬ್ಬ ಪ್ರಾರಂಭವಾದ ದಿನದಿಂದ ಸಾಲೂರು ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ತೆರದ ವಾಹನದಲ್ಲಿ ಉತ್ಸವ ಮೂರ್ತಿ ಇಟ್ಟು ದೇವಾಲಯದ ಸುತ್ತ ಮೂರು ಪ್ರದಕ್ಷಿಣೆ ಹಾಕುವ ಮೂಲಕ ವಿಶೇಷ ಪೂಜೆ ಕೈಂಕರ್ಯ ನಡೆಯುತ್ತಿದೆ.

ಕಾಲ್ನಡಿಗೆಯಲ್ಲಿ ಬಂದ ಭಕ್ತರು:

ವಾರಗಳ ಹಿಂದೆಯೇ ರಾಜ್ಯದ ವಿವಿಧೆಡೆಯಿಂದ ಕಾಲ್ನಡಿಗೆ ಮೂಲಕ ಸಾವಿರಾರು ಭಕ್ತರು ಬೆಟ್ಟಕ್ಕೆ ಆಗಮಿಸಿ ಬೀಡು ಬಿಟ್ಟಿದ್ದಾರೆ. ಸಾಲು ಸಾಲು ಸರಕಾರಿ ರಜೆ ಹಿನ್ನೆಲೆಯಲ್ಲಿ ಚಾಮರಾಜನಗರ, ಮೈಸೂರು, ಬೆಂಗಳೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ರಾಜ್ಯದ ಇನ್ನಿತರ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಹುಲಿ ವಾಹನ, ರುದ್ರಾಕ್ಷಿ ವಾಹನ ಹಾಗೂ ಬಸವ ವಾಹನ ಉತ್ಸವದಲ್ಲಿ ಭಕ್ತರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಹರಕೆ ಹೊತ್ತ ಭಕ್ತರು ದವಸ ಧಾನ್ಯ ಸೇರದಂತೆ ಇನ್ನಿತರ ವಸ್ತುಗಳನ್ನು ಎಸೆಯುವುದರ ಮೂಲಕ ದಂಡಿನ ಕೋಲನ್ನು ಹೊತ್ತು ಭಕ್ತಿಭಾವ ಮೆರೆದರು.

ಗ್ರಹಣವಿದ್ದರೂ ದರ್ಶಕ್ಕೆ ಅವಕಾಶ

ಮಂಗಳವಾರ ಸಂಜೆ ಗ್ರಹಣವಿದ್ದರೂ ಬೆಟ್ಟದ ದೇವಾಲಯದಲ್ಲಿ ಯಾವುದೇ ನಿರ್ಬಂಧವಿಲ್ಲದೇ ಮುಕ್ತವಾಗಿ ಭಕ್ತರಿಗೆ ಮಾದಪ್ಪನ ದರ್ಶನ ದೊರೆಯಲಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಕ್ಯಾತಾಯಿನಿ ದೇವಿ ಅವರು ತಿಳಿಸಿದ್ದಾರೆ.