ಮನೆ ಪ್ರಕೃತಿ ಸಂಜೆ 5 ರಿಂದ 6 ಗಂಟೆಯ ಅವಧಿಯಲ್ಲಿ ಸೂರ್ಯಗ್ರಹಣ ಸಂಭವ: ನೋಡುವುದು ಹೇಗೆ ?

ಸಂಜೆ 5 ರಿಂದ 6 ಗಂಟೆಯ ಅವಧಿಯಲ್ಲಿ ಸೂರ್ಯಗ್ರಹಣ ಸಂಭವ: ನೋಡುವುದು ಹೇಗೆ ?

0

ಉಡುಪಿ(Udupi): ಇಂದು ಸಂಜೆ 5 ರಿಂದ 6 ಗಂಟೆಯ ಅವಧಿಯಲ್ಲಿ ಪಾರ್ಶ್ವ ಸೂರ್ಯ ಗ್ರಹಣ ಸಂಭವಿಸಲಿದ್ದು, ಗ್ರಹಣವು ಭಾರತ ಸೇರಿದಂತೆ ಯುರೋಪ್ ಹಾಗೂ ಏಷ್ಯಾ ಖಂಡಗಳ ದೇಶಗಳಲ್ಲಿ ಗೋಚರಿಸಲಿದೆ.

ರಷ್ಯಾದಲ್ಲಿ ಗ್ರಹಣವು ಗೋಚರಿಸುವಾಗ ಚಂದ್ರನು ಶೇ 82ರಷ್ಟು ಭಾಗ ಸೂರ್ಯನನ್ನು ಆವರಿಸಿದರೆ ಭಾರತದ ಲೇಹ್’ನಿಂದ ಶೇ 54ರಷ್ಟು ಹಾಗೂ ದೆಹಲಿಯಿಂದ ಶೇ 44ರಷ್ಟು ಕಾಣಲಿದೆ.

ಕರ್ನಾಟಕದ ಎಲ್ಲ ಭಾಗಗಳಲ್ಲಿ ಸಂಜೆಯ ಸೂರ್ಯಾಸ್ತದ ಹೊತ್ತು ಗ್ರಹಣ ಗೋಚರಿಸಲಿದೆ. ಪಶ್ಚಿಮ ಮತ್ತು ನೈಋತ್ಯದ ಕಡೆಗಿನ ಕ್ಷಿತಿಜ ಗ್ರಹಣ ವೀಕ್ಷಿಸಲು ಉತ್ತಮ ಸ್ಥಳ. ಬೆಂಗಳೂರಿನಲ್ಲಿ ಶೇ 10ರಷ್ಟು ಗ್ರಹಣ ಕಂಡುಬಂದರೆ, ಉಡುಪಿಯಲ್ಲಿ ಗ್ರಹಣ ವೀಕ್ಷಿಸಲು ಉತ್ತಮ ಪ್ರದೇಶ. ಸಂಜೆ 5.08ಕ್ಕೆ ಪ್ರಾರಂಭವಾಗುವ ಗ್ರಹಣ 5.50ಕ್ಕೆ ಗರಿಷ್ಠ ಮಟ್ಟದ ಗ್ರಹಣ ಗೋಚರಿಸುತ್ತದೆ.

ಗ್ರಹಣದ ವಿಶೇಷತೆ?

ಉಡುಪಿಯಲ್ಲಿ ಗ್ರಹಣವು ಮುಗಿಯುವ ಸಮಯ ಸಂಜೆ 6.28. ಅದಕ್ಕೂ ಮುನ್ನವೇ 6.06ಕ್ಕೆ ಸೂರ್ಯಾಸ್ತ ಆಗುವುದರಿಂದ ಇಂದು ಅಸ್ತವಾಗುವ ಸೂರ್ಯನು ಗ್ರಹಣ ಹಿಡಿದ ಸೂರ್ಯನಾಗಿರುತ್ತಾನೆ.

ನೋಡುವುದು ಹೇಗೆ?

ಸೂರ್ಯ ಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು. ಟೆಲಿಸ್ಕೋಪ್, ದುರ್ಬೀನ್, ಎಕ್ಸ್ರೇ ಹಾಳೆ ಹಾಗೂ ಕ್ಯಾಮೆರಾಗಳಿಂದಲೂ ಸೂರ್ಯ ಗ್ರಹಣ ನೋಡುವುದೂ ಕಣ್ಣಿಗೆ ಹಾನಿಕಾರಕ. ವಿಶೇಷವಾದ ಗ್ರಹಣ-ವೀಕ್ಷಣಾ ಕನ್ನಡಕಗಳಿಂದ ಮಾತ್ರ ಗ್ರಹಣ ನೋಡಬೇಕು. ಪಿನ್-ಹೋಲ್ ಗಳ ಮೂಲಕವೂ ಸೂರ್ಯನ ಪ್ರಕ್ಷೇಪಣ ನೋಡಬಹುದು. ನೇರವಾಗಿ ಗ್ರಹಣ ವಕ್ಷಿಸಲು ಸಾದ್ಯವಾಗದಿದ್ದರೆ ಸಂಘದ ಯೂ-ಟ್ಯೂಬ್ ಚಾನೆಲ್ ಮೂಲಕ ನೇರ ಪ್ರಸಾರದಲ್ಲಿ ವೀಕ್ಷಿಸಬಹುದು.

ಸೂರ್ಯಗ್ರಹಣ ಎಂದರೆ?

ಚಂದ್ರನು, ಸೂರ್ಯ ಮತ್ತು ಭೂಮಿಯ ನಡುವಿನಲ್ಲಿ ಬರುವ ಕಾಲವನ್ನು ಸೂರ್ಯ ಗ್ರಹಣ ಎನ್ನಲಾಗುತ್ತದೆ. ಪ್ರತಿ ಅಮಾವಾಸ್ಯೆಯ ದಿನ ಚಂದ್ರನು ಭೂಮಿ ಮತ್ತು ಸೂರ್ಯನ ಮಧ್ಯ ಹಾದು ಹೋದರೂ ಮೂರು ಆಕಾಶಕಾಯಗಳು ಒಂದೇ ಸರಳರೇಖೆಯಲ್ಲಿರುವುದಿಲ್ಲ. ಹಾಗಾಗಿ ಪ್ರತಿ ಅಮಾವಾಸ್ಯೆಗೆ ಗ್ರಹಣ ಸಂಭವಿಸುವುದಿಲ್ಲ. ಚಂದ್ರನು ರಾಹು ಅಥವಾ ಕೇತು ಬಿಂದುವಿನಲ್ಲಿ ಬಂದಾಗ ಮಾತ್ರ ಸೂರ್ಯ ಗ್ರಹಣ ಸಂಭವಿಸುತ್ತದೆ.

ಚಂದ್ರನು ಸೂರ್ಯನಿಗೆ ಅಡ್ಡ ಬಂದು, ಸೂರ್ಯನ ಒಂದು ಭಾಗವು ಮಾತ್ರ ಗೋಚರಿಸಿದರೆ ಪಾರ್ಶ್ವ ಸೂರ್ಯಗ್ರಹಣ ಆಗುತ್ತದೆ. ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸಿದರೆ ಖಗ್ರಾಸ ಸೂರ್ಯಗ್ರಹಣ ವಾಗಲಿದೆ. ಇಂದಿನ ಸೂರ್ಯಗ್ರಹಣವು ಪಾರ್ಶ್ವ ಸೂರ್ಯಗ್ರಹಣವಾಗಿರುತ್ತದೆ. ಸಾಮಾನ್ಯವಾಗಿ ಪ್ರತಿ ಸೂರ್ಯಗ್ರಹಣದ ಮೊದಲು ಅಥವಾ ನಂತರ ಬರುವ ಹುಣ್ಣಿಮೆಯ ದಿನ ಚಂದ್ರ ಗ್ರಹಣ ಸಂಭವಿಸುತ್ತದೆ.

ಈ ಬಾರಿ ನ.8 ರಂದು ಚಂದ್ರ ಗ್ರಹಣ ನೋಡಬಹುದು.

ಹಿಂದಿನ ಲೇಖನಚಾಮರಾಜನಗರ: ಮಾದಪ್ಪನ ಬೆಟ್ಟದಲ್ಲಿ ಬುಧವಾರ ದೀಪಾವಳಿ ಜಾತ್ರೆ
ಮುಂದಿನ ಲೇಖನದುಃಖವಿಲ್ಲದೆ ಸುಖದ ಅನುಭೂತಿಯಿಲ್ಲ