ಮನೆ ದೇವಸ್ಥಾನ ಚಾಮರಾಜನಗರ: ದೇವಸ್ಥಾನದಲ್ಲೇ ಹೊಡೆದಾಡಿಕೊಂಡ ಅರ್ಚಕರು

ಚಾಮರಾಜನಗರ: ದೇವಸ್ಥಾನದಲ್ಲೇ ಹೊಡೆದಾಡಿಕೊಂಡ ಅರ್ಚಕರು

0

ಚಾಮರಾಜನಗರ: ಭಕ್ತರ ಕಾಣಿಕೆ ವಿಚಾರಕ್ಕೆ ಅರ್ಚಕರು ಹೊಡೆದಾಡಿಕೊಂಡ ಘಟನೆ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿನ ಶ್ರೀ ಸಿದ್ದಪ್ಪಾಜಿ ದೇವಾಲಯದಲ್ಲಿ ನಡೆದಿದೆ‌.

ಯಂತ್ರ ಹಾಗೂ ಭಕ್ತರಿಂದ ತಟ್ಟೆಗೆ ಬೀಳುವ ಕಾಣಿಕೆ ವಿಚಾರದ ಸಲುವಾಗಿ ಅರ್ಚಕ‌ ಕುಟುಂಬಕ್ಕೆ ಸೇರಿದ ಅಣ್ಣ- ತಮ್ಮಂದಿರು ಪರಸ್ಪರ ಹೊಡೆದಾಡಿಕೊಂಡಿರುವ ದೃಶ್ಯ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕಳೆದ ಎರಡ್ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅರ್ಚಕ ಕುಮಾರ್ ಹಾಗೂ ಮತ್ತೊಬ್ಬ ಅರ್ಚಕ ಶಿವಮೂರ್ತಿ ಅವರ ತಂದೆ ಶಂಕರಪ್ಪ ಹಾಗೂ ಮಗ ಮಹೇಶ್ ಅಲಿಯಾಸ್ ಬಾಲಾಜಿ ನಡುವೆ ಹೊಡೆದಾಟ ನಡೆದಿದೆ. ಈ ಸಂದರ್ಭದಲ್ಲಿ ಅಲ್ಲಿದ್ದ ಸಿಬ್ಬಂದಿ ಜಗಳ ಬಿಡಿಸಿದ್ದಾರೆ.

ರಾಜ್ಯದಲ್ಲಿಯೇ ಶ್ರೀ ಕ್ಷೇತ್ರ ಸಿದ್ದಪ್ಪಾಜಿ ಜಾತ್ರೆ ಹೆಸರುವಾಸಿ. ಜನವರಿ 6 ರಿಂದ 10 ರವರೆಗೆ ಅದ್ಧೂರಿಯಾಗಿ ಜಾತ್ರೆ ನಡೆದಿತ್ತು. ಜಾತ್ರೆ ಮುಗಿದರೂ ಭಕ್ತರು ರಾಜ್ಯದ ನಾನಾ ಭಾಗಗಳಿಂದ ಚಿಕ್ಕಲ್ಲೂರಿಗೆ ಭೇಟಿ ನೀಡುತ್ತಿದ್ದಾರೆ. ಜಾತ್ರೆಗೆ ಬಾರದ ಜನರು ಇದೀಗ ಹರಕೆ ತೀರಿಸುತ್ತಿದ್ದಾರೆ. ಈ ವೇಳೆ ಭಕ್ತರು ಹಾಕಿದ ತಟ್ಟೆ ಕಾಣಿಕೆ ಹೊಡೆದಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ದಾಯಾದಿಗಳ ನಡುವೆ ವೈಮನಸ್ಸು: ಬೊಪ್ಪೇಗೌಡನ ಪೀಠಾಧಿಪತಿ ಪುರದ ಶ್ರೀ ಜ್ಞಾನರಾಜೇ ಅರಸ್ ಹಾಗೂ ದಿ.ಪ್ರಭುದೇವ ರಾಜೇ ಅರಸ್ ಪುತ್ರ ಭರತರಾಜೇ ಅರಸ್ ನಡುವೆ ದೇವಾಲಯ ಆಡಳಿತ ನಿರ್ವಹಣೆ ಹಾಗೂ ಗೋಲಕ ವಿಚಾರವಾಗಿ ವೈಮನಸ್ಸು ಉಂಟಾಗಿತ್ತು.

ಇತ್ತೀಚೆಗೆ ಹಳೆ ಮಠದಲ್ಲಿ ಮರದ ಸಾಮಗ್ರಿಗಳಿಗೆ ಬೆಂಕಿ ಬಿದ್ದ ವಿಚಾರವಾಗಿ ಜ್ಞಾನರಾಜೇ ಅರಸ್ ಪತ್ನಿ ಸನ್ಮತಿ ಎಂಬುವರು ಈ ಘಟನೆಗೆ ಭರತರಾಜೇ ಅರಸ್ ಹಾಗೂ ಸಂಗಡಿಗರು ಕಾರಣ ಎಂದು ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಭರತ ರಾಜೇ ಅರಸ್ ಕೂಡ ಜ್ಞಾನ ರಾಜೇ ಅರಸ್ ಮೇಲೆ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದರು. ಇದರಿಂದ ಈ ಎರಡು ಗುಂಪುಗಳ ನಡುವೆ ಅಸಮಾಧಾನ ಏರ್ಪಟ್ಟಿತ್ತು.

ಅಷ್ಟರಲ್ಲಿ ಜಾತ್ರೆ ಬಂದಿದೆ. ಜಾತ್ರೆ ನಡೆಸುವ ಸಂಬಂಧ ಜಿಲ್ಲಾಡಳಿತ ಹಾಗೂ ಶಾಸಕ ಆರ್.ನರೇಂದ್ರ ಹಾಗೂ ಜ್ಞಾನರಾಜೇ ಅರಸ್ ಹಾಗೂ ಭರತರಾಜೇ ಅರಸ್ ಕುಟುಂಬದ ಜತೆ ಸಭೆ ನಡೆಸಿದ್ದರು. ನಿಮ್ಮ ಕುಟುಂಬದ ಕಲಹದಿಂದ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಜಾತ್ರೆ ನಡೆಸುವಂತೆ ಜಿಲ್ಲಾಡಳಿತ ಖಡಕ್​​ ಎಚ್ಚರಿಕೆ​ ನೀಡಿತ್ತು. ಈ ಎಲ್ಲ ಗೊಂದಲಗಳ ನಡುವೆ ಜಾತ್ರೆ ಯಶಸ್ವಿಯಾಗಿ ಮುಗೀತು ಎನ್ನುವಷ್ಟರಲ್ಲಿ ಅರ್ಚಕರ ಗಲಾಟೆ ಭಕ್ತರಲ್ಲಿ ಬೇಸರ ಮೂಡಿಸಿದೆ.

ಹಿಂದಿನ ಲೇಖನಅತ್ಯಾಚಾರ ಸಂತ್ರಸ್ತೆಯನ್ನು ವಿವಾಹವಾದ ಆರೋಪಿ: ಪ್ರಕರಣ ರದ್ದುಪಡಿಸಿದ ಹೈಕೋರ್ಟ್
ಮುಂದಿನ ಲೇಖನಚಾಮರಾಜನಗರ: ಸಾಲಬಾಧೆಯಿಂದ ಬೇಸತ್ತು ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ