ಮನೆ ಮನರಂಜನೆ “ಛೂ ಮಂತರ್‌’ ಚಿತ್ರ ವಿಮರ್ಶೆ

“ಛೂ ಮಂತರ್‌’ ಚಿತ್ರ ವಿಮರ್ಶೆ

0

ಹಾರರ್‌-ಥ್ರಿಲ್ಲರ್‌ ಸಿನಿಮಾ ಮಾಡುವಾಗ ಮೊದಲು ಗಮನಿಸಬೇಕಾದ ಅಂಶವೆಂದರೆ ಕ್ಷಣದಿಂದ ಕ್ಷಣಕ್ಕೆ ಪ್ರೇಕ್ಷಕರ ಕುತೂಹಲವನ್ನು ಹೇಗೆ ಹೆಚ್ಚು ಮಾಡಬಹುದು, ಅನಿರೀಕ್ಷಿತ ಜಾಗದಲ್ಲಿ ಹೇಗೆ ಭಯಬೀಳಿಸಬಹುದು, ಹೊಸ ಹೊಸ ಟ್ವಿಸ್ಟ್‌ಗಳ ಮೂಲಕ ಮುಂದಿನ ದೃಶ್ಯಗಳ ತವಕವನ್ನು ಹೇಗೆ ಹೆಚ್ಚಿಸಬಹುದು ಎಂಬುದು. ಈ ನಿಟ್ಟಿನಲ್ಲಿ “ಛೂ ಮಂತರ್‌’ ಚಿತ್ರದ ನಿರ್ದೇಶಕ ನವನೀತ್‌ ಪ್ರಯತ್ನವನ್ನು ಮೆಚ್ಚಬಹುದು.

Join Our Whatsapp Group

ಈ ಹಿಂದೆ “ಕರ್ವ’ ಮೂಲಕ ಹಾರರ್‌ ಫೀಲ್‌ ಕಟ್ಟಿಕೊಟ್ಟ ನವನೀತ್‌ ಈ ಬಾರಿ “ಛೂ ಮಂತರ್‌’ನಲ್ಲಿ ಅದನ್ನು ಮುಂದುವರೆಸಿದ್ದಾರೆ. ಹಾರರ್‌ನ ರೆಗ್ಯುಲರ್‌ ಅಂಶಗಳನ್ನು ಬಿಟ್ಟು ಪ್ರೇಕ್ಷಕರನ್ನು ಭಯಬೀಳಿಸಲು ಪ್ರಯತ್ನಿಸಿದ್ದಾರೆ.

ಬಂಗಲೆಯೊಳಗಿನ ಅಮಾನುಷ ಶಕ್ತಿ ಒಂದು ಕಡೆಯಾದರೆ ಅದನ್ನು ಓಡಿಸುವ ವ್ಯಕ್ತಿ ಮತ್ತೂಂದು ಕಡೆ.. ಹೀಗೆ ಸಾಗುವ ಕಥೆ ಹಲವು ಘಟನೆಗಳಿಗೆ ಸಾಕ್ಷಿಯಾಗುತ್ತದೆ. “ಛೂ ಮಂತರ್‌’ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ ಎಂದರೆ ಅದಕ್ಕೆ ಕಾರಣ ಚಿತ್ರದಲ್ಲಿ ಬರುವ ಟ್ವಿಸ್ಟ್‌-ಟರ್ನ್ ಗಳು. ಏನೋ ಆಗುತ್ತದೆ ಎಂದುಕೊಂಡರೆ ಅಲ್ಲಿ ಇನ್ನೇನೊ ಆಗುತ್ತದೆ. ಧುತ್ತನೇ ಬರುವ ಒಂದಷ್ಟು ದೃಶ್ಯಗಳು ಭಯಬೀಳಿಸುವಲ್ಲಿ ಯಶಸ್ವಿಯಾಗಿವೆ.

ಇದೊಂದು ಹಾರರ್‌-ಥ್ರಿಲ್ಲರ್‌ ಚಿತ್ರ. ಹಾಗಂತ ಇಲ್ಲಿ ನಗುವಿಗೆ ಕೊರತೆ ಇಲ್ಲ. ಚಿಕ್ಕಣ್ಣ ಹಾಗೂ ಶರಣ್‌ ನಡುವೆ ಬರುವ ಪಂಚಿಂಗ್‌ ಸಂಭಾಷಣೆಗಳು ಅಲ್ಲಲ್ಲಿ ನಗುತರಿಸುತ್ತವೆ. ಚಿತ್ರದ ಪ್ಲಸ್‌ ಗಳಲ್ಲಿ ಹಿನ್ನೆಲೆ ಸಂಗೀತ ಕೂಡಾ ಒಂದು. ಇಲ್ಲಿ ಅದು ಪ್ರಮುಖ ಪಾತ್ರ ವಹಿಸಿದೆ. ಹಾರರ್‌ ಎಂದರೆ ವಿಕಾರ ರೂಪ, ಕಿರುಚಾಟ ಎಂಬ ಭಾವನೆಯಲ್ಲಿ ಸಿನಿಮಾ ಮಾಡುವವರ ನಡುವೆ “ಛೂ ಮಂತರ್‌’ ಅದರಾಚೆ ಪ್ರಯತ್ನಿಸಿದೆ.

ನಟ ಶರಣ್‌ ಪಾತ್ರ ಹೊಸದಾಗಿದೆ. ಕಾಮಿಡಿ ಜೊತೆಗೆ ಗಂಭೀರವಾದ ಪಾತ್ರ ಅವರದು. ಅದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ವಿಭಿನ್ನ ಶೇಡ್‌ಗಳಲ್ಲಿ ಅವರ ಪಾತ್ರ ಸಾಗುತ್ತದೆ. ಉಳಿದಂತೆ ಅದಿತಿ ಪ್ರಭುದೇವ, ಮೇಘನಾ ಗಾಂವ್ಕರ್‌, ಪ್ರಭು ಮುಂಡ್ಕೂರ್‌ ಸೇರಿದಂತೆ ಇತರರು ನಟಿಸಿದ್ದಾರೆ. ಒಂದು ಥ್ರಿಲ್ಲರ್‌ ರೈಡ್‌ಗಾಗಿ “ಛೂ ಮಂತರ್‌’ ಬಾಗಿಲು ಬಡಿಯಬಹುದು.