ಮನೆ ಅಪರಾಧ ಚಿಕ್ಕಬಳ್ಳಾಪುರ ಪೊಲೀಸರ ಭರ್ಜರಿ ಬೇಟೆ: ಕೋಟಿ ಕೋಟಿ ಮೌಲ್ಯದ 5,140 ಮೊಬೈಲ್‌ ಕದ್ದಿದ್ದ ಖದೀಮರ ಬಂಧನ

ಚಿಕ್ಕಬಳ್ಳಾಪುರ ಪೊಲೀಸರ ಭರ್ಜರಿ ಬೇಟೆ: ಕೋಟಿ ಕೋಟಿ ಮೌಲ್ಯದ 5,140 ಮೊಬೈಲ್‌ ಕದ್ದಿದ್ದ ಖದೀಮರ ಬಂಧನ

0

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಪೊಲೀಸರು ಅಚ್ಚರಿಗೊಳಿಸುವ ರೀತಿಯಲ್ಲಿ ಭಾರೀ ಮೊಬೈಲ್ ಕಳವು ಪ್ರಕರಣವನ್ನು ಭೇದಿಸಿದ್ದು, ಸುಮಾರು 5 ಕೋಟಿ ರೂ. ಮೌಲ್ಯದ ಮೊಬೈಲ್‌ಗಳನ್ನು ಕಳವು ಮಾಡಿದ್ದ ಭಾರೀ ಜಾಲವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಈ ಘಟನೆ 2024ರ ನವೆಂಬರ್‌ 23ರಂದು ನಡೆದಿದೆ. ಉತ್ತರ ಪ್ರದೇಶದ ನೋಯ್ಡಾದಿಂದ ಬೆಂಗಳೂರಿಗೆ ಸಾಗುತ್ತಿದ್ದ ಟ್ರಕ್ ಒಂದು ರಾಷ್ಟ್ರೀಯ ಹೆದ್ದಾರಿ 44ರ ಮೂಲಕ ಸಾಗುತ್ತಿತ್ತು. ಈ ಟ್ರಕ್‌ನಲ್ಲಿ ಒಟ್ಟು 6,640 ಮೊಬೈಲ್‌ಗಳು ಸಾಗಿಸಲಾಗುತ್ತಿತ್ತು. ಆದರೆ, ಬೆಂಗಳೂರು ತಲುಪುವ ಮೊದಲೇ, ಚಿಕ್ಕಬಳ್ಳಾಪುರದ ಪೇರೇಸಂದ್ರ ಠಾಣಾ ವ್ಯಾಪ್ತಿಯ ರೆಡ್ಡಿಗೊಲ್ಲವಾರಹಳ್ಳಿ ಬಳಿ ಇರುವ ಡಾಬಾ ಬಳಿ ಟ್ರಕ್ ನಿಂತುಹೋಗುತ್ತದೆ. ಟ್ರಕ್ ಇತ್ತು ಚಾಲಕ ಮಾತ್ರ ಕಾಣೆಯಾಗಿದ್ದ.

ಜಿಪಿಎಸ್‌ ಮಾಹಿತಿ ಆಧರಿಸಿ ಕಂಪನಿ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಶಾಕ್ ಆಗುವಂತಹ ವಿಚಾರ ಹೊರಬಂದಿತು. ಚಾಲಕನ ಕ್ಯಾಬಿನ್‌ನಿಂದಲೇ ರಂಧ್ರ ಕೊರೆದು ಮೊಬೈಲ್‌ಗಳನ್ನು ಮತ್ತೊಂದು ಟ್ರಕ್‌ಗೆ ಬದಲಾಯಿಸಿ ಕಳವು ಮಾಡಲಾಗಿತ್ತು. ಈ ಅಪರಾಧದ ವೇಳೆ 6,640 ಮೊಬೈಲ್‌ಗಳಲ್ಲಿ 5,140 ಮೊಬೈಲ್‌ಗಳು ಕಳವುಗೊಂಡಿದ್ದವು.

ಪೇರೇಸಂದ್ರ ಠಾಣೆ ಹಾಗೂ ಸೆನ್ ವಿಭಾಗದ ಪೊಲೀಸರು ಈ ಪ್ರಕರಣದ ತನಿಖೆಯನ್ನು ಕೈಗೊಂಡು, ಹರಿಯಾಣ, ರಾಜಸ್ಥಾನ, ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿದರು. ಪರಿಶ್ರಮದ ಫಲವಾಗಿ 7 ಆರೋಪಿಗಳನ್ನು ಬಂಧಿಸಲಾಗಿದ್ದು, ಅವರು ಕ್ರಮವಾಗಿ: ಟ್ರಕ್ ಚಾಲಕ ರಾಹುಲ್, ಇಮ್ರಾನ್, ಮೊಹಮ್ಮದ್ ಮುಸ್ತಫಾ, ಅನೂಪ್ ರಾಯ್, ಅಭಿಜಿತ್ ಪೌಲ್, ಸಕೃಲ್ಲಾ ಹಾಗೂ ಯೂಸುಫ್ ಖಾನ್ ಆಗಿದ್ದಾರೆ.

ಬಂಧಿತರಿಂದ ಮೊಬೈಲ್ ಸಾಗಾಟ ಮಾಡಲು ಬಳಸಲಾಗಿದ್ದ ಇನ್ನೊಂದು ಟ್ರಕ್‌ ಜಪ್ತಿ ಮಾಡಲಾಗಿದ್ದು, 5,140 ಕಳವಾದ ಮೊಬೈಲ್‌ಗಳಲ್ಲಿ 56ನ್ನು ಈಗಾಗಲೇ ಪತ್ತೆ ಹಚ್ಚಲಾಗಿದೆ. ತನಿಖೆ ವೇಳೆ ತಿಳಿದುಬಂದಂತೆ, ಈ ಕಳ್ಳರು ದೆಹಲಿಗೆ ಟ್ರಕ್‌ ಮೂಲಕ ಮೊಬೈಲ್‌ಗಳನ್ನು ಸಾಗಿಸಿ ಕೇವಲ ₹90 ಲಕ್ಷಕ್ಕಷ್ಟೆ ಬ್ಲಾಕ್‌ ಮಾರ್ಕೆಟ್‌ನಲ್ಲಿ ಮಾರಾಟ ಮಾಡಿದ್ದಾರೆ. ಈ ಮೊಬೈಲ್‌ಗಳು ನಂತರ ಭಾರತದೆಲ್ಲೆಡೆ ಸಾಗಿಸಲ್ಪಟ್ಟಿದ್ದು, ಆರೋಪಿಗಳ ಖಾತೆಯಲ್ಲಿ ಉಳಿದಿದ್ದ ₹20 ಲಕ್ಷ ನಗದನ್ನು ಪೊಲೀಸರು ಸೀಜ್ ಮಾಡಿದ್ದಾರೆ.

ಆರೋಪಿಗಳಲ್ಲಿ ಕೆಲವು ಹಿಂದೆ ಪಶ್ಚಿಮ ಬಂಗಾಳದಲ್ಲಿ ನಡೆದ 9 ಕೋಟಿ ಮೌಲ್ಯದ ಐಫೋನ್ ಕಳವು ಪ್ರಕರಣಕ್ಕೂ ಸಂಬಂಧಪಟ್ಟಿದ್ದು, ಬಂಗಾಳ ಪೊಲೀಸರು ಬಾಡಿ ವಾರೆಂಟ್ ಮೂಲಕ ಆರೋಪಿಗಳನ್ನು ಪಡೆದುಕೊಂಡಿದ್ದಾರೆ.

ಈ ಪ್ರಕರಣದಲ್ಲಿ ಚಿಕ್ಕಬಳ್ಳಾಪುರ ಪೊಲೀಸರು ತೋರಿಸಿದ ಚುರುಕುತನ ಮತ್ತು ಕಾರ್ಯಕ್ಷಮತೆ ಪೊಲೀಸ್ ಇಲಾಖೆಗೂ ಹೆಮ್ಮೆ ತಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಇನ್ನೂ ಮುಂದುವರಿದಿದ್ದು, ಶೀಘ್ರದಲ್ಲೇ ಉಳಿದ ಮೊಬೈಲ್‌ಗಳ ಪತ್ತೆ ಮತ್ತು ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗುತ್ತಿದೆ.