ಚಿಕ್ಕಮಗಳೂರು, ಸೆಪ್ಟೆಂಬರ್ 11: ಇದೀಗ ಚಿಕ್ಕಮಗಳೂರು ನಗರದ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಮೇಲೆ ಮಹಿಳೆಯೊಬ್ಬರು ಹಲ್ಲೆ ನಡೆಸಿದ್ದಾರೆ.
ಅರಳುಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ಸಹೋದರನ ಚಿಕಿತ್ಸೆಗೆ ಚಿಕ್ಕಮಗಳೂರು ನಗರದ ಟಿಪ್ಪು ನಗರದ ನಿವಾಸಿ ತಸೀಮಾ ಮತ್ತು ಸಂಬಂಧಿಕರು ಬಂದಿದ್ದರು. ತುರ್ತು ಚಿಕಿತ್ಸಾ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೂಳೆ ತಜ್ಞ ವೆಂಕಟೇಶ್ ಅವರು ತಪಾಸಣೆ ನಡೆಸುವಾಗ ರೋಗಿಯ ಸಂಬಂಧಿಕರು ಒಟ್ಟಿಗೇ ತುರ್ತು ಸೇವಾ ಘಟಕದ ವಾರ್ಡ್ ನ ಒಳಗೆ ಬಂದಿದ್ದು, ಹೊರ ಹೋಗುವಂತೆ ವೈದ್ಯರು ತಿಳಿಸಿದಾಗ ಮಾತಿಗೆ ಮಾತು ಬೆಳೆದಿದೆ. ಕೋಪಗೊಂಡ ಗಾಯಾಳು ಸಹೋದರಿ ತಸೀಮಾ ವೈದ್ಯರ ಕೊರಳ ಪಟ್ಟಿ ಹಿಡಿದು ಎಳೆದಿದ್ದಾರೆ. ಅಲ್ಲದೆ ಚಪ್ಪಲಿ ಬಿಚ್ಚಿ ಎಸೆದಿದದ್ದಾರೆ.
ಅಲ್ಲೇ ಇದ್ದ ಕೆಲವರು ಈ ಘಟನೆಯನ್ನು ತಮ್ಮ ಮೊಬೈಲ್ ಫೋನ್ನಲ್ಲಿ ವಿಡಿಯೊ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಕೂಡಲೇ ಹೊರರೋಗಿ ವಿಭಾಗ ಬಂದ್ ಮಾಡಿದ ವೈದ್ಯರು ಮತ್ತು ಸಿಬ್ಬಂದಿ, ಜಿಲ್ಲಾ ಶಸ್ತ್ರಚಿಕಿತ್ಸಕರ ಕಚೇರಿ ಎದುರು ಜಮಾಯಿಸಿದರು. ಏಕಾಏಕಿ ಹಲ್ಲೆ ನಡೆಸಿದ್ದರಿಂದಾಗಿ ವೈದ್ಯರು ಹಾಗೂ ಸಿಬ್ಬಂದಿಯ ಆತ್ಮಸ್ಥೈರ್ಯ ಕುಗ್ಗಿಸಿದಂತಾಗಿದೆ ಎಂದು ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳೆಲ್ಲರೂ ಕೂಡಾ ಸೇವೆಯನ್ನ ಸ್ಥಗಿತಗೊಳಿಸಿ ಆಸ್ಪತ್ರೆ ಬಂದ್ ಮಾಡಿ, ಪ್ರತಿಭಟನೆ ನಡೆಸಿದರು.
ಇಬ್ಬರ ಬಂಧನ
ಆಸ್ಪತ್ರೆ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಂತೆ ಎಚ್ಚೆತ್ತುಕೊಂಡ ಚಿಕ್ಕಮಗಳೂರು ಪೊಲೀಸ್ ಇಲಾಖೆ ತಸೀಮಾ ಇರ್ಫಾನ್ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ತಸೀಮಾ ಹಾಗೂ ಆಕೆಯ ಸಹೋದರನನ್ನು ಬಂಧಿಸಿದ್ದಾರೆ.
ವೈದ್ಯರ ಪ್ರತಿಭಟನೆಯಿಂದ ರೋಗಿಗಳಿಗೆ ಪರದಾಟ
ಜಿಲ್ಲಾಸ್ಪತ್ರೆಯ ಸಿಬ್ಬಂದಿಯ ದಿಡೀರ್ ಪ್ರತಿಭಟನೆಯಿಂದಾಗಿ ಚಿಕಿತ್ಸೆಗೆಂದು ಬಂದ ರೋಗಿಗಳು ಪರದಾಡುವಂತಾಯಿತು. ಒಂದೆಡೆ ರೋಗಿಗಳ ಗೋಳು ನೋಡಲಾಗದೆ ಅವರ ಕಡೆಯವರು ಬಂದು ಆಸ್ಪತ್ರೆ ಸಿಬ್ಬಂದಿಗಳ ಬಳಿ ಆಕ್ರೋಶ ವ್ಯಕ್ತಪಡಿಸಿದ್ದರು.