ಚಿಕ್ಕಮಗಳೂರು: ದತ್ತಜಯಂತಿಯ ಕೊನೆಯ ದಿನವಾದ ಇಂದು ಶ್ರೀರಾಮ ಸೇನೆ ಚಿಕ್ಕಮಗಳೂರು ತಾಲೂಕಿನ ನಾಗೇನಹಳ್ಳಿ ದರ್ಗಾದಲ್ಲಿ ದತ್ತಜಯಂತಿ ಆಚರಣೆ ಮಾಡುವುದಾಗಿ ಘೋಷಣೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ನಾಗೇನಹಳ್ಳಿ ಗ್ರಾಮದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ದರ್ಗಾದ ಸುತ್ತ 200 ಮೀ ವ್ಯಾಪ್ತಿಯಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲಾ ಪ್ರವೇಶಿಸದಂತೆ ಶ್ರೀರಾಮ ಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆ ಮುಖಂಡ ಗಂಗಾಧರ್ ಕುಲಕರ್ಣಿ ಅವರಿಗೆ ನಿಷೇಧ ಹೇರಲಾಗಿದೆ. ಇನ್ನು ನಾಗೇನಹಳ್ಳಿ ದರ್ಗಾದಲ್ಲಿ ದತ್ತಜಯಂತಿ ಆಚರಣೆಗೆ ಸಿದ್ಧತೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಶ್ರೀರಾಮಸೇನೆ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ ಅವರನ್ನು ಬಸವನಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ದರ್ಗಾದಲ್ಲಿ ದತ್ತಜಯಂತಿ ಆಚರಣೆಗೆ ನಿಶ್ಚಯಿಸಿದ್ದ ಶ್ರೀರಾಮಸೇನೆ
ನಾಗೇನಹಳ್ಳಿ ದರ್ಗಾದಲ್ಲೂ ದರ್ಗಾದಲ್ಲಿಇದೆ ಮೊದಲ ಬಾರಿಗೆ ದತ್ತಜಯಂತಿ ಆಚರಣೆಗೆ ರಾಮಸೇನೆ ಪ್ಲಾನ್ ಮಾಡಿಕೊಂಡಿತ್ತು. ಮುಸ್ಲಿಂರು ನಮ್ಮ ದತ್ತಪೀಠದಲ್ಲಿ ಉರುಸ್ ಆಚರಣೆ ಮಾಡುತ್ತಾರೆ. ನಾವು ನಾಗೇನಹಳ್ಳಿ ದರ್ಗಾದಲ್ಲಿ ಡಿ.26ರಂದು ದತ್ತಜಯಂತಿ ಆಚರಣೆ ಮಾಡುತ್ತೇವೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಹೇಳಿದ್ದರು.
ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾವನ್ನು ಸಂಪೂರ್ಣ ಹಿಂದೂ ಪೀಠಕ್ಕಾಗಿ ಆಗ್ರಹಿಸಿ ಶ್ರೀರಾಮಸೇನೆ ಇತ್ತೀಚೆಗೆ 7 ದಿನಗಳ ದತ್ತಮಾಲಾ ಅಭಿಯಾನವನ್ನು ಆರಂಭಿಸಿತ್ತು. ಈ ಬಾರಿ 20ನೇ ವರ್ಷದ ದತ್ತಮಾಲಾ ಅಭಿಯಾನ ನಡೆದಿದ್ದು ರಾಜ್ಯಾದ್ಯಂತ ಕಾರ್ಯಕರ್ತರು ದತ್ತಮಾಲಾಧಾರಣೆ ಮಾಡಿ ಏಳು ದಿನ ಅಭಿಯಾನ ಕೈಗೊಂಡಿದ್ದರು.
ಜಿಲ್ಲೆಯಾದ್ಯಂತ ಹೈಅಲರ್ಟ್ ಘೋಷಣೆ, 4 ಸಾವಿರ ಪೊಲೀಸರ ನಿಯೋಜನೆ ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ದತ್ತಜಯಂತಿ ಆಚರಣೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಕುರಿತಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಆಮ್ಟೆ ಪ್ರತಿಕ್ರಿಯೆ ನೀಡಿದ್ದು, ಜಿಲ್ಲೆಯಲ್ಲಿ 28 ಚೆಕ್ಪೋಸ್ಟ್, 300ಕ್ಕೂ ಹೆಚ್ಚು ಸಿಸಿ ಕ್ಯಾಮರಾ, 50ಕ್ಕೂ ಬಾಡಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ.