ಮನೆ ಅಪರಾಧ ತುಮಕೂರಿನಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆ: 6 ಜನರ ಬಂಧನ

ತುಮಕೂರಿನಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆ: 6 ಜನರ ಬಂಧನ

0

ತುಮಕೂರು: ಗುಬ್ಬಿ ಠಾಣೆಯ ಪೊಲೀಸರು ಜಿಲ್ಲೆಯಲ್ಲಿನ ಮಕ್ಕಳ ಮಾರಾಟ ಜಾಲವನ್ನು ಭೇದಿಸಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಆರೋಪಿಗಳನ್ನು ಬಂಧಿಸಿದ್ದಾರೆ.

Join Our Whatsapp Group

ತುಮಕೂರಿನ ಖಾಸಗಿ ನರ್ಸಿಂಗ್ ಕಾಲೇಜಿನ ಮ್ಯಾನೇಜರ್ ಮಹೇಶ್ (39), ಆಸ್ಪತ್ರೆಯ ಸ್ಟಾಪ್ ನರ್ಸ್​​ಗಳಾದ ಪೂರ್ಣಿಮಾ (39) ಹಾಗೂ ಸೌಜನ್ಯ (48), ಚಿಕ್ಕನಾಯಕನಹಳ್ಳಿ ಮೂಲದ ಫಾರ್ಮಸಿಸ್ಟ್‌ ಮಹಬೂಬ್ ಷರೀಪ್ (52), ಟ್ಯಾಟೋ ಹಾಕುತ್ತಿದ್ದ ಕೆ.ಎನ್. ರಾಮಕೃಷ್ಣಪ್ಪ (53), ಹನುಮಂತರಾಜು (45) ಬಂಧಿತ ಆರೋಪಿಗಳು.

ಬಂಧಿತರಿಂದ 1 ಕಾರು, 50 ಸಾವಿರ ನಗದು, 4 ಮೊಬೈಲ್​ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಜೂ.9ರಂದು ಗುಬ್ಬಿ ಪಟ್ಟಣದಲ್ಲಿ 11 ತಿಂಗಳ ರಾಕಿ ಎಂಬ ಗಂಡು ಮಗು ಅಪಹರಣವಾಗಿತ್ತು. ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಗುವಿನ ಅಪಹರಣ ಪ್ರಕರಣ ಬೆನ್ನತ್ತಿದ್ದ ಪೊಲೀಸರಿಗೆ ಒಂದೇ ಗ್ಯಾಂಗ್ ​ನಿಂದ 9 ಮಕ್ಕಳನ್ನು ಮಾರಾಟ ಮಾಡಿರುವ ಮಾಹಿತಿ ದೊರೆತಿದೆ.

ಈ ಮಾಹಿತಿ ಆಧರಿಸಿ ಆರೋಪಿಗಳನ್ನು ಬೆನ್ನತ್ತಿದ ಪೊಲೀಸರಿಗೆ ಇದೊಂದು ಮಕ್ಕಳ ಮಾರಾಟ ಜಾಲ ಎಂದು ತಿಳಿದಿದೆ. ಬಳಿಕ ಈ ಜಾಲದಲ್ಲಿ ತುಮಕೂರಿನ ಖಾಸಗಿ ಆಸ್ಪತ್ರೆ ಸಿಬ್ಬಂದಿ ಭಾಗಿಯಾಗಿರುವ ಬಗ್ಗೆ ಮಾಹಿತಿ ದೊರತಿದೆ.

ಆರೋಪಿಗಳು ಈ ಜಾಲದಲ್ಲಿ ಭಾಗಿಯಾಗಿದ್ದಾರೆ ಎಂದು ಖಚಿತವಾಗುತ್ತಿದ್ದಂತೆ, ಪೊಲೀಸರು ಐವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ತಾವು ಮಾಡುತ್ತಿದ್ದ ಕೃತ್ಯದ ಬಗ್ಗೆ ಬಾಯಿ ಬಿಟ್ಟಿದ್ದಾರೆ.

ಆರೋಪಿಗಳು ವಿವಾಹ ಪೂರ್ವ ಗರ್ಭಧರಿಸಿದ, ಅಕ್ರಮ ಸಂಬಂಧದಿಂದ ಜನಿಸಿದ ಮಕ್ಕಳನ್ನು ಮಾರಾಟ ಮಾಡುತ್ತಿದ್ದರು. ಅಲ್ಲದೆ ಬಡವರ ಮಕ್ಕಳನ್ನು ಅಪಹರಿಸಿ ಮಾರಾಟ ಮಾಡುತ್ತಿದ್ದರು. ಆರೋಪಿಗಳು ‌ಮಧುಗಿರಿಯ ಗೊಲ್ಲಹಳ್ಳಿ, ದಾವಣಗೆರೆ ಮತ್ತು ಮಂಡ್ಯ ಸೇರಿದಂತೆ ಹಲವು ಕಡೆ ಮಕ್ಕಳನ್ನು ಮಾರಾಟ ಮಾಡಿದ್ದರು.

ಸದ್ಯ 9 ಮಕ್ಕಳ ಪೈಕಿ 4 ಮಕ್ಕಳನ್ನು ದತ್ತು ಸ್ವೀಕಾರ ಕೇಂದ್ರದಲ್ಲಿ ಇರಿಸಲಾಗಿದೆ. ಮಾರಾಟವಾಗಿದ್ದ ಒಂದು ಮಗು ಮರಳಿ ಪೋಷಕರ ಮಡಿಲು ಸೇರಿದೆ.

ಹಿಂದಿನ ಲೇಖನತಲೆನೋವು: ಭಾಗ ಎರಡು
ಮುಂದಿನ ಲೇಖನನಾಟ್‌ ಔಟ್‌ ಮೇಲೆ ರಚನಾ ಇಂದರ್‌ ನಿರೀಕ್ಷೆ