ಮನೆ ಕಾನೂನು ಸಣ್ಣಪುಟ್ಟ ವಸ್ತು ಮಾರಾಟ ಮಾಡಲು ಪೋಷಕರಿಗೆ ಸಹಾಯ ಮಾಡುವ ಮಕ್ಕಳು ಬಾಲಕಾರ್ಮಿಕರಾಗುವುದಿಲ್ಲ: ಕೇರಳ ಹೈಕೋರ್ಟ್

ಸಣ್ಣಪುಟ್ಟ ವಸ್ತು ಮಾರಾಟ ಮಾಡಲು ಪೋಷಕರಿಗೆ ಸಹಾಯ ಮಾಡುವ ಮಕ್ಕಳು ಬಾಲಕಾರ್ಮಿಕರಾಗುವುದಿಲ್ಲ: ಕೇರಳ ಹೈಕೋರ್ಟ್

0

ತಮ್ಮ ಪೋಷಕರಿಗೆ ಪೆನ್ನು ಮತ್ತಿತರ ಸಣ್ಣ ವಸ್ತುಗಳನ್ನು ಮಾರಾಟ ಮಾಡಲು ಸಹಾಯ ಮಾಡುವ ಮಕ್ಕಳನ್ನು ಬಾಲಕಾರ್ಮಿಕರೆಂದು ಪರಿಗಣಿಸಲಾಗದು. ಹೀಗಾಗಿ ಬೀದಿಗಳಲ್ಲಿ ವಸ್ತುಗಳನ್ನು ಮಾರಾಟ ಮಾಡುವ ವಲಸೆ ಪೋಷಕರ ಮಕ್ಕಳನ್ನು ಪೊಲೀಸ್ ಮತ್ತು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ವಶಕ್ಕೆ ತೆಗೆದುಕೊಳ್ಳುವಂತಿಲ್ಲ ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ಹೇಳಿದೆ .

[ಪಪ್ಪು ಬವಾರಿಯಾ ಮತ್ತು ಜಿಲ್ಲಾಧಿಕಾರಿ ಸಿವಿಲ್ ಸ್ಟೇಷನ್ ಇನ್ನಿತರರ ನಡುವಣ ಪ್ರಕರಣ].

ಆದರೆ, ಮಕ್ಕಳನ್ನು ರಸ್ತೆಯಲ್ಲಿ ಅಲೆದಾಡಿಸುವ ಬದಲು ವಿದ್ಯಾಭ್ಯಾಸಕ್ಕೆ ಕಳುಹಿಸಬೇಕು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ನ್ಯಾ. ವಿ ಜಿ ಅರುಣ್ ಸ್ಪಷ್ಟಪಡಿಸಿದರು.

“ಪೆನ್ನು ಮತ್ತಿತರ ಸಣ್ಣ ವಸ್ತುಗಳನ್ನು ಮಾರಾಟ ಮಾಡಲು ತಮ್ಮ ಪೋಷಕರಿಗೆ ಸಹಾಯ ಮಾಡುವ ಮಕ್ಕಳ ಚಟುವಟಿಕೆಯು ಬಾಲ ಕಾರ್ಮಿಕತನ ಹೇಗಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾನು ಸೋತಿದ್ದೇನೆ. ಮಕ್ಕಳನ್ನು ಪೋಷಕರೊಂದಿಗೆ ಅಡ್ಡಾಡಲು ಬಿಡುವ ಬದಲು ಅವರಿಗೆ ಶಿಕ್ಷಣ ನೀಡಬೇಕು” ಎಂದು ಪೀಠ ಹೇಳಿತು.  

ಬಡತನದ ಬಗ್ಗೆ ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ನೀಡಿದ್ದ ಹೇಳಿಕೆಯೊಂದನ್ನೂ ನ್ಯಾಯಾಲಯ ಉಲ್ಲೇಖಿಸಿದೆ. “ಬಡವನಾಗಿರುವುದು ಅಪರಾಧವಲ್ಲ ಎಂಬ ರಾಷ್ಟ್ರಪಿತಾಮಹನ ಸಾಲನ್ನು ಉಲ್ಲೇಖಿಸುವುದಾದರೆ ಬಡತನ ಹಿಂಸೆಯ ಅತಿಕೆಟ್ಟ ರೂಪವಾಗಿದೆ” ಎಂದಿತು.

ರಾಜಸ್ಥಾನ ಮೂಲದ ಪೋಷಕರು ತಮ್ಮ ಇಬ್ಬರು ಮಕ್ಕಳನ್ನು ತಮ್ಮ ಸುಪರ್ದಿಗೆ ಒಪ್ಪಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯವ್ಯಕ್ತಪಡಿಸಿತು.

“ಆದರೆ ಪೊಷಕರು ಅಲೆಮಾರಿ ಜೀವನ ನಡೆಸುತ್ತಿರುವಾಗ ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದಾದರೂ ಹೇಗೆ” ಎಂದು ನ್ಯಾಯಾಲಯ ಆಶ್ಚರ್ಯವ್ಯಕ್ತಪಡಿಸಿತು. 

“ವಸ್ತುಗಳನ್ನು ಮಾರಾಟ ಮಾಡಲು ಮಕ್ಕಳನ್ನು ಬೀದಿಗೆ ಬಿಡುವುದಿಲ್ಲ. ಅವರಿಗೆ ಶಿಕ್ಷಣ ಕೊಡಿಸುವುದಾಗಿ ಸಂವಾದದ ವೇಳೆ ಅರ್ಜಿದಾರರು ಹೇಳಿದ್ದಾರೆ. ಪೋಷಕರೇ ಅಲೆಮಾರಿ ಜೀವನ  ನಡೆಸುತ್ತಿರುವಾಗ ಮಕ್ಕಳಿಗೆ ಸರಿಯಾದ ಶಿಕ್ಷಣವನ್ನು ಹೇಗೆ ಒದಗಿಸಬಹುದು ಎಂದು  ಅಚ್ಚರಿಯಾಗುತ್ತಿದೆ” ಎಂಬುದಾಗಿ ನ್ಯಾಯಮೂರ್ತಿಗಳು ಹೇಳಿದರು.   

ವಿಚಾರಣೆಯ ಕೊನೆಗೆ ಪುನರ್ವಸತಿ ಕೇಂದ್ರದಲ್ಲಿದ್ದ ಇಬ್ಬರು ವಲಸೆ ಮಕ್ಕಳನ್ನು ಬಿಡುಗಡೆ ಮಾಡಲು ಅದು ಆದೇಶಿಸಿತು. ಪ್ರಕರಣದ ಮುಂದಿನ ವಿಚಾರಣೆ ಇಂದು ಮುಂದುವರೆಯಲಿದೆ.

ಹಿಂದಿನ ಲೇಖನಬಜರಂಗದಳ ಸಹ ಸಂಚಾಲಕನ ಮೇಲೆ ಹಲ್ಲೆಗೆ ಯತ್ನ: ಮೂವರು ಆರೋಪಿಗಳು ಪೊಲೀಸರ ವಶಕ್ಕೆ
ಮುಂದಿನ ಲೇಖನಸತ್ಯ ಹೊರಬರಲೇ ಬೇಕು. ತಯಾರಾಗಿರಿ: ‘ಸಿದ್ದು ನಿಜ ಕನಸು’ ಪುಸ್ತಕ ಕುರಿತು ಬಿಜೆಪಿ ಟ್ವೀಟ್