ಮನೆ ರಾಜ್ಯ ಸೆ.29ರಿಂದ ಎರಡು ದಿನ ಮಕ್ಕಳ ದಸರಾ

ಸೆ.29ರಿಂದ ಎರಡು ದಿನ ಮಕ್ಕಳ ದಸರಾ

0

ಮೈಸೂರು(Mysuru) : ದಸರೆಯ ಪ್ರಮುಖ ಆಕರ್ಷಣೆಯಾದ ಮಕ್ಕಳ ದಸರಾ ಸೆ.29ರಿಂದ ಎರಡು ದಿನಗಳ ಕಾಲ ಜೂನಿಯರ್ ಮಹಾರಾಣಿ ಕಾಲೇಜಿನ ಆವರಣದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಶಾಲೆಗಳ 7 ರಿಂದ 10ನೇ ತರಗತಿ ವರೆಗಿನ 1 ಸಾವಿರ ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ. ಜಿಲ್ಲೆಯಲ್ಲಿ 2  ಲಕ್ಷ ಮಕ್ಕಳಿದ್ದು, ಮಕ್ಕಳ ಪ್ರತಿಭೆಯನ್ನು ಮಾನದಂಡವಾಗಿಟ್ಟುಕೊಂಡು ಅಧಿಕಾರಿಗಳು ಹಾಗೂ ಶಿಕ್ಷಕರು 1 ಸಾವಿರ ಮಕ್ಕಳನ್ನು ಮಕ್ಕಳ ದಸರಾ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಿದ್ದಾರೆ.
ಮಕ್ಕಳ ದಸರಾದಲ್ಲಿ ಸಂಗೀತ, ನೃತ್ಯ, ಚರ್ಚಾ ಸ್ಪರ್ಧೆ, ಆಶುಭಾಷಣ, ಜಾನಪದ, ಚಲನಚಿತ್ರಗೀತೆ, ರಸಪ್ರಶ್ನೆ, ಪ್ರಬಂಧ, ವಿವಿಧ ವೇಷಭೂಷಣ ಸ್ಪರ್ಧೆ ಹೀಗೆ 31 ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇದರೊಂದಿಗೆ ದೇಸಿ ಆಟಗಳಾದ ಲಗ್ಗೋರಿ, ಬುಗುರಿ, ಚೌಕಾಬಾರ, ಕುಂಟೆಬಿಲ್ಲೆ, ಹಗ್ಗಜಗ್ಗಾಟ ಸ್ಪರ್ಧೆಗಳು ನಡೆಯಲಿವೆ.

ವಿಶೇಷಚೇತನ ಮಕ್ಕಳಿಗಾಗಿ ವೇಶಭೂಷಣ ಸ್ಪರ್ಧೆ, ನೃತ್ಯ ಪ್ರದರ್ಶನ ಏರ್ಪಡಿಸಲಾಗಿದೆ.
ಹಾಡಿ ಮಕ್ಕಳಿಂದ ಕಾರ್ಯಕ್ರಮ: ಮಾವುತರು ಹಾಗೂ ಕಾವಾಡಿಗಳ ಮಕ್ಕಳನ್ನೂ ಮಕ್ಕಳ ದಸರಾದಲ್ಲಿ ಜೊತೆಯಾಗಿಸಿಕೊಳ್ಳಲಾಗಿದೆ. ಅವರಿಂದ ಸೆ.29ರ ಮದ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.

9 ಸ್ಟಾಲ್ಗಳು: ಜಗನ್ಮೋಹನ ಅರಮನೆ ಆವರಣದಲ್ಲಿ ಶಿಕ್ಷಣ ಇಲಾಖೆ ವತಿಯಿಂದ 9 ಮಳಿಗೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಅಲ್ಲಿ ಮಕ್ಕಳಿಗಾಗಿ ಸರ್ಕಾರ ರೂಪಿಸಿರುವ ಸವಲತ್ತುಗಳು, ವಿಜ್ಞಾನ ಮತ್ತು ತಂತ್ರಜ್ಞಾನ, ಕರಕುಶಲ, ಚಿತ್ರಕಲೆಗಳ ಪ್ರದರ್ಶನ ಏರ್ಪಡಿಸಲಾಗುತ್ತಿದೆ.