ಮನೆ ರಾಜ್ಯ ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ: 25ಕ್ಕೂ ಹೆಚ್ಚು ಗಾಯಾಳುಗಳಿಗೆ ನೋಟಿಸ್, ಜೂನ್ 11ಕ್ಕೆ ವಿಚಾರಣೆ

ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ: 25ಕ್ಕೂ ಹೆಚ್ಚು ಗಾಯಾಳುಗಳಿಗೆ ನೋಟಿಸ್, ಜೂನ್ 11ಕ್ಕೆ ವಿಚಾರಣೆ

0

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಜೂನ್ 4 ರಂದು ನಡೆದ ದಾರುಣ ಕಾಲ್ತುಳಿತ ದುರಂತದಿಂದ ಇಡೀ ರಾಜ್ಯವಾಸಿಗಳಿಗೆ ಆಘಾತ ಉಂಟಾಗಿದೆ. ಈ ದುರ್ಘಟನೆಯಲ್ಲಿ 11 ಮಂದಿ ಸಾವಿಗೀಡಾಗಿದ್ದರೆ, 65ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದೀಗ ಸರ್ಕಾರ ಈ ಪ್ರಕರಣದ ತನಿಖೆಗೆ ಚಾಲನೆ ನೀಡಿದ್ದು, ಬೆಂಗಳೂರು ನಗರ ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ತನಿಖೆ ಚುರುಕಾಗುತ್ತಿದೆ.

ತನ್ನ ತನಿಖೆಯ ಮೊದಲ ಭಾಗವಾಗಿ, ಜಿಲ್ಲಾಧಿಕಾರಿ ಬೆಂಗಳೂರಿನ ಪ್ರಮುಖ ನಾಲ್ಕು ಆಸ್ಪತ್ರೆಗಳಾದ ಬೌರಿಂಗ್, ಪೋರ್ಟಿಸ್, ಮಣಿಪಾಲ್ ಹಾಗೂ ವೈದೇಹಿ ಆಸ್ಪತ್ರೆಗಳಿಗೆ ಭೇಟಿ ನೀಡಿ, ಕಾಲ್ತುಳಿತದಿಂದ ಗಾಯಗೊಂಡು ದಾಖಲಾಗಿದ್ದ ಜನರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಆಸ್ಪತ್ರೆಗಳಲ್ಲಿ ಎಷ್ಟು ಮಂದಿ ಅಡ್ಮಿಟ್ ಆಗಿದ್ದರು, ಎಷ್ಟು ಜನ ಡಿಸ್ಚಾರ್ಜ್ ಆದರು, ಎಷ್ಟು ಮಂದಿ ಸಾವಿಗೀಡಾದರು ಎಂಬ ಮಾಹಿತಿಯನ್ನು ಲಿಖಿತದಲ್ಲಿ ಪಡೆದುಕೊಳ್ಳಲಾಗಿದೆ.

ಈ ತನಿಖೆಯ ಮುಂದಿನ ಹಂತವಾಗಿ, ಜಿಲ್ಲಾಧಿಕಾರಿಯವರು 25ಕ್ಕೂ ಹೆಚ್ಚು ಗಾಯಾಳುಗಳಿಗೆ ನೋಟಿಸ್ ನೀಡಿದ್ದು, ಅವರೆಲ್ಲರೂ ಜೂನ್ 11ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಈ ವೇಳೆ, ಗಾಯಾಳುಗಳಿಂದ ಘಟನೆ ಸಂಭವಿಸಿದ್ದ ರೀತಿಗೆ ಸಂಬಂಧಿಸಿದಂತೆ ನಿಖರ ಮಾಹಿತಿಯನ್ನು ಸಂಗ್ರಹಿಸಲಾಗುವುದು. ಘಟನೆಯ ಸಂದರ್ಭ, ನೂಕುನುಗ್ಗಲು ಹೇಗೆ ಉಂಟಾಯಿತು, ಸುರಕ್ಷತೆ ಏಕೆ ವಿಫಲವಾಯಿತು ಎಂಬ ಎಲ್ಲಾ ಅಂಶಗಳ ಕುರಿತು ಸ್ಪಷ್ಟತೆ ಪಡೆಯಲಾಗುತ್ತಿದೆ.

ಅದರೊಂದಿಗೆ, ಈ ಘಟನೆಗೆ ಕಾರಣವಾದ ಮೂಲ ಪತ್ತೆ ಹಚ್ಚಿ ಸರ್ಕಾರಕ್ಕೆ 15 ದಿನಗಳೊಳಗೆ ತನಿಖಾ ವರದಿ ಸಲ್ಲಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು. ಮೃತರ ಕುಟುಂಬದ ಸದಸ್ಯರು ಮತ್ತು ಗಾಯಾಳುಗಳಿಂದ ವ್ಯಕ್ತಿ ಪ್ರಕಾರ ಮಾಹಿತಿ ಸಂಗ್ರಹಿಸಿ, ವರದಿಗೆ ಸೂಕ್ತ ಆಧಾರವನ್ನು ಸೇರಿಸಲಾಗುವುದು.

ಇದುವರೆಗೆ 65 ಮಂದಿ ಗಾಯಾಳುಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಐದು ಮಂದಿ ಇನ್ನೂ ಚಿಕಿತ್ಸೆಯಲ್ಲಿದ್ದಾರೆ. ತನಿಖೆಯಲ್ಲಿ ಈ ಮಾಹಿತಿಗಳೂ ಸೇರಿಸಲ್ಪಡಲಿವೆ.

ಈ ಕಾಲ್ತುಳಿತದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೆಲ ರಾಜಕೀಯ ನಾಯಕರೂ ಸರ್ಕಾರದ ನಿರ್ಲಕ್ಷ್ಯವನ್ನೇ ಈ ದುರಂತಕ್ಕೆ ಕಾರಣವೆಂದು ಆರೋಪಿಸಿದ್ದಾರೆ. ಹೀಗಾಗಿ ಈ ತನಿಖಾ ವರದಿ ಬಹುಮುಖ್ಯವಾಗಿದ್ದು, 11 ಜನರ ಸಾವಿಗೆ ಏನು ಕಾರಣ ಅಂತಾ ಪತ್ತೆಯಾಗುತ್ತಾ ಕಾದು ನೋಡಬೇಕಿದೆ.