ಮನೆ ದೇವಸ್ಥಾನ ಮದ್ದೂರಿನ ಪಟ್ಟಾಭಿರಾಮ ಸನ್ನಿಧಿ: ಲಕ್ಷ್ಮಣನಿಲ್ಲದ ರಾಮದೇವರ ಗುಡಿ

ಮದ್ದೂರಿನ ಪಟ್ಟಾಭಿರಾಮ ಸನ್ನಿಧಿ: ಲಕ್ಷ್ಮಣನಿಲ್ಲದ ರಾಮದೇವರ ಗುಡಿ

0

ಬೆಂಗಳೂರು-ಮೈಸೂರು ರಸ್ತೆಯಲ್ಲಿ ಚನ್ನಪಟ್ಟಣ ಹಾಗೂ ಮಂಡ್ಯದ ನಡುವೆ ಇರುವ ಮದ್ದೂರು ಪೌರಾಣಿಕ ಪ್ರಸಿದ್ಧ ನಗರ. ದ್ವಾಪರಯುಗದೊಂದಿಗೆ ನಂಟು ಹೊಂದಿರುವ ಈ ಊರು ಹಿಂದೆ ಅರ್ಜುನಪುರಿ, ಕಂದಬ ಕ್ಷೇತ್ರವೆಂದೂ ಕರೆಸಿಕೊಂಡಿತ್ತಂತೆ.

ದ್ವಾಪರಯುಗದಲ್ಲಿ ಶ್ರೀಕೃಷ್ಣ ಪರಮಾತ್ಮನ ಜೊತೆ ತೀರ್ಥಯಾತ್ರೆಗಾಗಿ ಇಲ್ಲಿಗೆ ಬಂದ ಅರ್ಜುನನು ಈ ಸ್ಥಳದಲ್ಲಿ ತನಗೆ ಉಗ್ರನರಸಿಂಹನ ರೂಪ ತೋರಿಸುವಂತೆ ಪ್ರಾರ್ಥಿಸಿದನಂತೆ.  ಮತ್ತೆ ತಾನು ಉಗ್ರರೂಪ ತಳೆಯಲು ಸಾಧ್ಯವಿಲ್ಲ, ಹಾಗೆ ಉಗ್ರರೂಪ ತಳೆದರೆ ತನ್ನನ್ನು ಶಾಂತಪಡಿಸುವುದು ಕಷ್ಟ. ಹೀಗಾಗಿ ಶಿಲಾರೂಪದಲ್ಲಿ ಉಗ್ರ ನರಸಿಂಹ ರೂಪ ತೋರುವುದಾಗಿ ಹೇಳಿದ ಶ್ರೀಕೃಷ್ಣ ಸೃಷ್ಟಿಕರ್ತ ಬ್ರಹ್ಮದೇವರನ್ನು ಪ್ರಾರ್ಥಿಸಿ, ಅವರಿಂದ ಇಲ್ಲಿ ಉಗ್ರನರಸಿಂಹ ವಿಗ್ರಹ ಪ್ರತಿಷ್ಠಾಪಿಸಿದರಂತೆ. ಹೀಗಾಗಿ ಈ ಊರು ಅರ್ಜುನಪುರಿ ಎಂಬ ಹೆಸರು ಬಂದಿದೆ.

ಬಣ್ಣದ ಬೊಂಬೆಗೆ ಹೆಸರಾದ ಚನ್ನಪಟ್ಟಣಕ್ಕೆ ಇಲ್ಲಿಂದ ಮರ ತೆಗೆದುಕೊಂಡು ಹೋಗುತ್ತಿದ್ದ ಕಾರಣ ಇದಕ್ಕೆ ನಂತರ ಮರದೂರು ಎಂಬ ಹೆಸರು ಬಂತು. ಇದೇ ಮದ್ದೂರಾಯಿತೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಆದರೆ, ಮೈಸೂರು ಹುಲಿ ಟಿಪ್ಪು ಸುಲ್ತಾನ್ ಇಲ್ಲಿ ತನ್ನ ಮದ್ದುಗುಂಡುಗಳನ್ನು ಸಂಗ್ರಹಿಸಿಡುತ್ತಿದ್ದನಂತೆ. ಮದ್ದು ಸಂಗ್ರಹಿಸಿದ, ಮದ್ದು ತಯಾರಿಸಿದ ಊರು  ಮದ್ದೂರಾಯಿತು ಎಂದು ಇತಿಹಾಸತಜ್ಞರು ಹೇಳುತ್ತಾರೆ.

ಮದ್ದೂರಿನಲ್ಲಿ ವರದರಾಜ ದೇವಸ್ಥಾನ, ಉಗ್ರನರಸಿಂಹ ದೇವಾಲಯಗಳು ಅಕ್ಕ ಪಕ್ಕದಲ್ಲಿ ಇದ್ದು ಇದರ ಸಮೀಪ ಮತ್ತೂ ಒಂದು ಪುರಾತನ ದೇವಾಲಯವಿದೆ. ಅದುವೇ ಪಟ್ಟಾಭಿರಾಮದೇವರ ದೇವಾಲಯ.

ಈ ದೇವಾಲಯದ ಮುಂದೆ ಬೃಹತ್ ಗರುಡಗಂಬವಿದೆ. ದೇವಾಲಯಕ್ಕೆ ವಿಶಾಲ ಆವರಣವಿದ್ದು, ಆವರಣದೊಳಗೆ ಮೊದಲಿಗೆ ಸಾಧಾರಣ ಕಲ್ಲುಗಳಿಂದ ನಿರ್ಮಿಸಿದ ದೊಡ್ಡ ಮಂಟಪ ಇದೆ. ಮಂಟದ ಮೇಲೆ ಗಾರೆಗಚ್ಚಿನ ಗೋಪುರ ನಿರ್ಮಿಸಲಾಗಿದ್ದು, ಇದರಲ್ಲಿ ಹನುಮದ್ ಸಮೇತ ಸೀತಾರಾಮಲಕ್ಷ್ಮಣರ ಗಾರೆಯ ಮೂರ್ತಿಗಳಿವೆ. ಎಡ ಬಲದಲ್ಲಿ ಗರುಡ ಮತ್ತು ಹನುಮನ ಮೂರ್ತಿಗಳಿವೆ. ಎಡ ಬಲದ ಮತ್ತೆರೆಡು ಗೂಡುಗಳಲ್ಲಿ ಶ್ರೀಮನ್ನಾರಾಯಣ ಹಾಗೂ ಶಿವನ ಮೂರ್ತಿಗಳಿವೆ.

ಮಂಟಪ ದಾಟುತ್ತಿದ್ದಂತೆ ಕೆತ್ತನೆಗಳುಳ್ಳ ಆಕರ್ಷಕ ಹೆಬ್ಬಾಗಿಲು ಕಾಣುತ್ತದೆ. ಬಾಗಿಲ ಪಕ್ಕದಲ್ಲಿ ಗಣಪನ ಸುಂದರ ಮೂರ್ತಿಯಿದೆ. ಸುಖನಾಸಿ, ಅಂತರಾಳ ಹಾಗೂ ಗರ್ಭಗುಡಿಯನ್ನು ದೇವಾಲಯ ಒಳಗೊಂಡಿದ್ದು,  ಗರ್ಭಗೃಹದಲ್ಲಿ ಸಿಂಹಾಸನದ ಮೇಲೆ ಕುಳಿತಿರುವ ಸೀತಾರಾಮರ ಸುಂದರ ಮೂರ್ತಿಯಿದೆ. ಪಟ್ಟಾಭಿಷೇಕ ಮಹೋತ್ಸವದ ವಿಗ್ರಹ ಇದಾಗಿರುವ ಹಿನ್ನೆಲೆಯಲ್ಲಿ ಹಿಂಭಾಗದಲ್ಲಿ ಛತ್ರಿಯಿದೆ. ಪ್ರಭಾವಳಿಯಲ್ಲಿ ಸುಂದರ ಕೆತ್ತನೆ ಹಾಗೂ ದೇವತಾಮೂರ್ತಿಗಳ ಕೆತ್ತನೆ ಇದೆ. ಈ ವಿಗ್ರಹದ ಕೆಳಗೆ ದೂರದಲ್ಲಿ ಅಂಜಲೀಬದ್ದ ಹನುಮನ ಮೂರ್ತಿಯಿದೆ. ಸಾಮಾನ್ಯವಾಗಿ ಎಲ್ಲ ರಾಮಮಂದಿರಗಳಲ್ಲೂ ಸೀತಾರಾಮಾನಂಜನೇಯರ ಜೊತೆ ಲಕ್ಷ್ಮಣನ ವಿಗ್ರಹ ಇದ್ದೇ ಇರುತ್ತದೆ. ಆದರೆ ಈ ದೇವಾಲಯದಲ್ಲಿ ಲಕ್ಷ್ಮಣನ ವಿಗ್ರಹ ಇಲ್ಲದಿರುವುದೇ ವಿಶೇಷ. ಶ್ರೀರಾಮನವಮಿ ಹಾಗೂ ಹನುಮಜಯಂತಿಯಲ್ಲಿ ವಿಶೇಷ ಪೂಜೆ ನಡೆಯುತ್ತದೆ. .

ಹಿಂದಿನ ಲೇಖನಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ 1 ಲಕ್ಷ ರೂ ಸ್ವಯಂ ಉದ್ಯೋಗ ಸಾಲ ವಿತರಣೆ
ಮುಂದಿನ ಲೇಖನಏನನ್ನು ಸಾಧಿಸಬೇಕು ಎಂಬ ಛಲ ಇರಬೇಕು: ಡಾ.ಕೆ.ವಿ.ರಾಜೇಂದ್ರ