ಮನೆ ಸ್ಥಳೀಯ ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ದುರಂತ: ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ದುರಂತ: ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

0

ಮೈಸೂರು: ಆರ್‌ಸಿಬಿ ವಿಜಯೋತ್ಸವದ ವೇಳೆ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಭೀಕರ ಕಾಲ್ತುಳಿತದ ಪರಿಣಾಮ 11 ಮಂದಿ ಅಭಿಮಾನಿಗಳು ಸಾವಿಗೀಡಾಗಿರುವುದಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಆರೋಪಿಸಿದೆ. ದುರ್ಘಟನೆಗೆ ಸರಕಾರ, ಗುಪ್ತಚರ ಇಲಾಖೆ ವೈಫಲ್ಯ ಕಾರಣ ಎಂದು ಕಿಡಿಕಾರಿದ್ದಾರೆ.

ಈ ಕುರಿತು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ರಿಕಾ ಪ್ರಕಟಣೆಯ ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಇದು ಭದ್ರತಾ ಲೋಪವಲ್ಲ, ಆಡಳಿತ ವೈಫಲ್ಯ. ಸಾರ್ವಜನಿಕ ಸಭೆ ಆಯೋಜನೆಗೆ ಸರಿಯಾದ ಪೂರ್ವ ಸಿದ್ಧತೆ ಇಲ್ಲದೆ ಕಾರ್ಯಕ್ರಮ ರೂಪಿಸಿರುವುದು ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಶಾಸಕ ಶ್ರೀವತ್ಸ ಕೂಡ ಈ ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರ ಇದಕ್ಕೆ ನೈತಿಕ ಹೊಣೆ ಹೊರುವಂತದ್ದು ಎಂದು ತಿಳಿಸಿದ್ದಾರೆ. “ಪೂರ್ವ ತಯಾರಿ ಇಲ್ಲದ ಕಾರಣವೇ ಇಂತಹ ಭೀಕರ ಕಾಲ್ತುಳಿತ ಸಂಭವಿಸಿದೆ. ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು” ಎಂದು ಅವರು ಹೇಳಿದ್ದಾರೆ.

ಈವರೆಗೂ 11 ಜನ ಸಾವನ್ನಪ್ಪಿರುವ ಈ ದುರ್ಘಟನೆ ಸರ್ಕಾರದ ವಿಫಲ ಭದ್ರತಾ ವ್ಯವಸ್ಥೆ ಹಾಗೂ ನಿರ್ಲಕ್ಷ್ಯದ ಫಲವೆಂದು ಬಿಜೆಪಿ ವಕ್ತಾರ ಎಂ. ಮೋಹನ್ ಆರೋಪಿಸಿದ್ದಾರೆ. ಆಟ ಆಡಿದವರೇ ಯಾರೋ, ಆದರೆ ಅದನ್ನ ಸಂಭ್ರಮಿಸುವ ನೆಪದಲ್ಲಿ ಡಿಸಿಎಂ ಆಟಗಾರರ ಬಳಿ ಪೋಸ್ ಕೊಟ್ಟು ಇದರ ಮೂಲಕ ಇನ್ನಷ್ಟು ಪ್ರಚಾರಗಿಟ್ಟಿಸಿಕೊಳ್ಳಲು ಹೋಗಿದ್ದರು. ಇವರ ನಿರ್ಲಕ್ಷ್ಯದಿಂದ ಪ್ರಾಣ ಕಳೆದುಕೊಂಡಿದ್ದು ಮಾತ್ರ ಬಡಪಾಯಿಗಳು.

ಬಿಜೆಪಿ ಸಂಸದ ಪ್ರತಾಪ್ ಸಿಂಹ ಕೂಡ ಈ ಘಟನೆಗೆ ಸಂಬಂಧಿಸಿ ಸರ್ಕಾರದ ಘೋಷಿತ ಪರಿಹಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. “ಕೇರಳದಲ್ಲಿ ಆನೆ ತುಳಿತದಿಂದ ಮೃತಪಟ್ಟವರಿಗೆ 15 ಲಕ್ಷ, ಕೋಮು ದಾಳಿಯಲ್ಲಿ ಸತ್ತವರ ಕುಟುಂಬಗಳಿಗೆ 25 ಲಕ್ಷ ಪರಿಹಾರ ನೀಡಲಾಗಿದೆ. ಆದರೆ ಇಲ್ಲಿ ಸಣ್ಣ ವಯಸ್ಸಿನ ಮಕ್ಕಳು, ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಅವರ ಕುಟುಂಬಕ್ಕೆ ಆಗಿರುವ ನೋವು 10 ಲಕ್ಷ ಪರಿಹಾರ ಕೊಟ್ಟರೆ ಮುಗಿಯುತ್ತಾ? ಎಂದು ಪ್ರಶ್ನಿಸಿದರು.

ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಸರ್ಕಾರದ ವಿರುದ್ಧ ಜನತೆ ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ಈ ಸರ್ಕಾರ ಹೆಣ ಬೀಳಿಸುವ ಸರ್ಕಾರ. ಭದ್ರತೆಯ ಕೊರತೆಯಿಂದಾಗಿ ಸಂಭ್ರಮಾಚರಣೆ ದುರ್ಘಟನೆಗೆ ಕಾರಣವಾಯಿತು ಎಂದು ಬಿಜೆಪಿ ನಾಯಕರು ಒಟ್ಟಾಗಿ ಅಭಿಪ್ರಾಯಪಟ್ಟಿದ್ದಾರೆ.