ಮನೆ ರಾಜ್ಯ ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಘಟನೆ ಸರ್ಕಾರದ ಪ್ರಾಯೋಜಿತ ಕೊಲೆ: ಅರಗ ಜ್ಞಾನೇಂದ್ರ

ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಘಟನೆ ಸರ್ಕಾರದ ಪ್ರಾಯೋಜಿತ ಕೊಲೆ: ಅರಗ ಜ್ಞಾನೇಂದ್ರ

0

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ದುರಂತ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವೇ ಪ್ರಮುಖ ಕಾರಣವಾಗಿದ್ದು, ಈ ಪ್ರಕರಣದಲ್ಲಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಜಿ. ಪರಮೇಶ್ವರರನ್ನು ಕ್ರಮವಾಗಿ ಎ1, ಎ2, ಎ3 ಆರೋಪಿಗಳನ್ನಾಗಿ ಮಾಡಬೇಕು ಎಂದು ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಆಗ್ರಹಿಸಿದ್ದಾರೆ.

ಬೆಂಗಳೂರು ಕೆಕೆ ಗೆಸ್ಟ್ ಹೌಸ್‌ನಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, “ಕಾಲ್ತುಳಿತದ ಪರಿಣಾಮ 11 ಜನರು ದುರ್ಮರಣ ಹೊಂದಿದ್ದಾರೆ. ಈ ಭೀಕರ ಘಟನೆ ನಡೆದದ್ದು ಸರಿಯಾದ ಪೂರ್ವಸಿದ್ಧತೆ ಇಲ್ಲದ ಕಾರಣ. ಸರ್ಕಾರ ಈ ದುರ್ಘಟನೆಯನ್ನು ತಡೆಯಲು ಕ್ರಮ ಕೈಗೊಂಡಿದ್ದರೆ, ಇಂತಹ ಘಟನೆ ಸಂಭವಿಸಿರುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅವರು ಮುಂದಾಗಿ, “ಈ ಕಾರ್ಯಕ್ರಮದಲ್ಲಿ ರಾಜ್ಯಪಾಲರು, ಸಿಎಂ, ಡಿಸಿಎಂ ಹಾಜರಿದ್ದರು. ಆದರೆ, ಯಾವುದೇ ಪ್ರೊಟೋಕಾಲ್‌ ಪಾಲನೆಯಾಗಿಲ್ಲ. ಜನಸಮೂಹವನ್ನು ನಿಯಂತ್ರಿಸಲು ವ್ಯವಸ್ಥೆ ಇರಲಿಲ್ಲ. ಇವರು ಸೆಲ್ಫಿ ತೆಗೆದುಕೊಳ್ಳಲು ಬ್ಯುಸಿಯಾಗಿದ್ದರು. ಈ ಸಮಯದಲ್ಲಿ ಸರಕಾರದ ನಿರ್ಲಕ್ಷ್ಯದಿಂದ ಅಮಾಯಕರ ಪ್ರಾಣ ಹೋಯಿತು” ಎಂದು ದೂರಿದರು.

ನಾನು ಗೃಹ ಸಚಿವ ಇದ್ದಾಗ ಪುನೀತ್ ರಾಜ್‌ಕುಮಾರ್ ನಿಧನರಾಗಿದ್ದಾಗ ನಾವು ಹೇಗೆ ನಿಭಾಯಿಸಿದ್ದೆವು. 20 ಲಕ್ಷ ಜನರನ್ನು ನಾವು ನಿಭಾಯಿಸಿದ್ದೆವು. ಇವರಿಂದ ಚಿನ್ನಸ್ವಾಮಿ ಪ್ರಕರಣ ನಿಭಾಯಿಸಲು ಆಗಿಲ್ಲ. ಪೊಲೀಸರು ಬೇಡ ಅಂದರೂ ಇವರು ಕಾರ್ಯಕ್ರಮ ಮಾಡಿದರು. ನಿಮ್ಮ ಮಕ್ಕಳು, ಮೊಮ್ಮಕ್ಕಳು ಫೋಟೋ ಸೆಷನ್‌ಗೆ ಈ ಕಾರ್ಯಕ್ರಮ ಮಾಡಿದ್ರಾ ಎಂದು ಪ್ರಶ್ನೆ ಮಾಡಿದರು.

ಅಧಿಕಾರಿಗಳು ಕಾರ್ಯಕ್ರಮದ ಭದ್ರತೆಯ ಬಗ್ಗೆ ತಕ್ಷಣದ ಸೂಚನೆ ನೀಡಿದ್ರು. ಆದರೂ ಕಾರ್ಯಕ್ರಮ ಮುಂದೂಡಲು ಸಾಧ್ಯವಿಲ್ಲ ಎಂಬ ಹೇಳಿಕೆಯಿಂದಾಗಿ ಸಮಸ್ಯೆ ಉಂಟಾಯಿತು. “ಈ ಕಾರ್ಯಕ್ರಮ ನಿಲ್ಲಿಸಬಹುದಿತ್ತು, ಕೇವಲ ರಾಜಕೀಯ ಹೆಮ್ಮೆಗಾಗಿಯೇ ಜನರ ಪ್ರಾಣ ಹಾಳು ಮಾಡಲಾಗಿದೆ. ಗೃಹ ಸಚಿವನನ್ನು ಕೂಡಾ ನಿರ್ಲಕ್ಷಿಸಲಾಗಿದೆ. ಇದು ಅವರವರ ರಾಜಕೀಯದ ಆಟ. ಜನರನ್ನು ರಾಜಕೀಯದ ಹೊಡೆತಕ್ಕೆ ಬಲಿ ಮಾಡಲಾಗಿದೆ” ಎಂದು ಖಂಡಿಸಿದರು.

ಮುಂದುವರೆದು, “ಪೆಹಲ್ಗಾಮ್ ಉಗ್ರರ ದಾಳಿ ವೇಳೆ ಭದ್ರತೆ ಇಲ್ಲದಿದ್ದಂತ ಹೇಳಿ ಆರೋಪ ಮಾಡಿದವರು, ಈಗ ತಾವು ನಡೆಸಿದ ಕಾರ್ಯಕ್ರಮದಲ್ಲಿ ಸುರಕ್ಷತೆ ಇಲ್ಲದಿದ್ದುದನ್ನು ಮರೆತಿದ್ದಾರೆ. ಅದಕ್ಕೂ ಇದಕ್ಕೂ ಹೋಲಿಕೆ ಮಾಡಬಾರದಿತ್ತು. ಜನರ ಜೀವಕ್ಕೂ ಹೆಚ್ಚು ಸೆಲ್ಫಿ ಮತ್ತು ಆಟೋಗ್ರಾಫ್‌ಗಳಿಗೆ ಬೆಲೆ ಇಟ್ಟ ಇಂತಹ ಸರಕಾರ ನಿಜವಾಗಿಯೂ ಜನಪ್ರಿಯವೇ?” ಎಂದು ಪ್ರಶ್ನಿಸಿದರು.

ಈ ಘಟನೆ ತನಿಖೆಗೆ ನ್ಯಾ.ಕುನ್ಹಾ ನೇಮಕಕ್ಕೂ ವಿರೋಧ ಮಾಡಿದ ಅವರು, ಕುನ್ಹಾ ಒಬ್ಬರೇ ಅಲ್ಲಾ ನಿವೃತ್ತ ನ್ಯಾಯಾಧೀಶರು ಇರೋದು. ಬಹಳ ಜನ ರಿಟೈರ್ಡ್ ಜಡ್ಜ್ ಇದ್ದಾರೆ. ಹಾಲಿ ಜಡ್ಜ್ರಿಂದ ಪ್ರಕರಣ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದರು. ಈ ಹಿನ್ನಲೆಯಲ್ಲಿ ಸಿಎಂ, ಡಿಸಿಎಂ, ಗೃಹ ಸಚಿವರು ರಾಜೀನಾಮೆ ನೀಡಿ ಸಾರ್ವಜನಿಕ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.