ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವ ಸಂದರ್ಭ ಉಂಟಾದ ಕಾಲ್ತುಳಿತ ದುರಂತ ಕುರಿತು, ಸರ್ಕಾರದ ವಿರುದ್ಧ ಆಗುತ್ತಿರುವ ಆರೋಪಗಳಿಗೆ ತೀವ್ರ ಪ್ರತಿಕ್ರಿಯೆ ನೀಡಿರುವ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್, “ಈ ಘಟನೆಗೆ ಸರ್ಕಾರದ ಯಾವುದೇ ಹೊಣೆಗಾರಿಕೆ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮಕ್ಕೆ ಸರ್ಕಾರ ಅಥವಾ ಯಾವುದೇ ಸರ್ಕಾರಿ ಇಲಾಖೆಯು ನೇರವಾಗಿ ಸಂಬಂಧ ಹೊಂದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ಸತ್ಯ ಅಲ್ಲಿನ ಕಾರ್ಯಕ್ರಮವನ್ನು ಸರ್ಕಾರದ ಜೊತೆ ಕೂಡಿಸುವುದು ಸರಿಯಲ್ಲ ಎಂದರು. ಈ ಪ್ರಕರಣದಲ್ಲಿ ಸರ್ಕಾರ ತಕ್ಷಣ ಸ್ಪಂದಿಸಿದೆ, ಹಾಗೂ ಸೂಕ್ತ ಕ್ರಮಕೈಗೊಂಡಿದೆ” ಎಂದು ಹೇಳಿದ್ದಾರೆ.
ಪಾಟೀಲ್ ಅವರು ಮುಂದುವರೆದು, “ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ತನಿಖೆಯ ಪ್ರಗತಿ ಕುರಿತು ಕಾಂಗ್ರೆಸ್ ಹೈಕಮಾಂಡ್‌ಗೂ ಮಾಹಿತಿ ನೀಡಲಾಗುತ್ತದೆ. ತನಿಖೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಕೂಡಲೇ ವರದಿ ಸಿದ್ಧಪಡಿಸಲಾಗುತ್ತಿದ್ದು, ನಾಳೆಯೊಳಗೆ ಕೋರ್ಟ್‌ಗೆ ಸಲ್ಲಿಸಲಾಗುವುದು” ಎಂದು ತಿಳಿಸಿದ್ದಾರೆ.
ಪಾಟೀಲ್ ಈ ವೇಳೆ ಸರ್ಕಾರದ ಸ್ಪಂದನೆಯ ಬಗ್ಗೆ ವಿವರಿಸುತ್ತಾ, “ದುರಂತ ನಡೆದ ಕೂಡಲೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಆಸ್ಪತ್ರೆಗೆ ಹಾಗೂ ಘಟನಾ ಸ್ಥಳಕ್ಕೆ ತೆರಳಿದ್ದರು. ಪರಿಹಾರ ಮೊತ್ತವನ್ನು ಕೂಡ ಹೆಚ್ಚಿಸಲಾಗಿದೆ. ಘಟನೆಯ ಕುರಿತು ರಾಜ್ಯಮಂತ್ರಿಮಂಡಲದ ಸಭೆಯಲ್ಲೂ ಚರ್ಚೆ ನಡೆದು ತನಿಖೆಗೆ ಆದೇಶಿಸಲಾಗಿದೆ” ಎಂದರು.
ಹೀಗಾಗಿ ಇದರಲ್ಲಿ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದು ಸಚಿವ ಹೆಚ್.ಕೆ. ಪಾಟೀಲ್ ಸ್ಪಷ್ಟೀಕರಿಸಿದರು.














